ಜಿಲ್ಲೆ

ಕೈದಿಗಳಿಗೆ ಮಾನಸಿಕ ಕಾಯಿಲೆ; 4 ಸಾವಿರಕ್ಕೂ ಅಧಿಕ ರೋಗಿಗಳು ಎಂದು ಹೈಕೋರ್ಟ್​ಗೆ ವರದಿ ಸಲ್ಲಿಕೆ

malli

ಬೆಂಗಳೂರು: ರಾಜ್ಯದಲ್ಲಿರುವ 15 ಸಾವಿರ ಕೈದಿಗಳ ಪೈಕಿ 4,916ಕ್ಕೂ ಹೆಚ್ಚು ಕೈದಿಗಳು ವಿವಿಧ ಬಗೆಯ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದರಲ್ಲಿ 237 ಕೈದಿಗಳು ಗಂಭೀರ ಸ್ವರೂಪದ ಅಸ್ವಸ್ಥತೆಗೆ ಒಳಗಾಗಿದ್ದಾರೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ತಿಳಿಸಿದೆ.

ಹೈಕೋರ್ಟ್​ನ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಈ ಕುರಿತ ಅಂಕಿ ಅಂಶಗಳನ್ನು ಒಳಗೊಂಡ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಪ್ರಮಾಣ ಪತ್ರದಲ್ಲೇನಿದೆ?: ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಗರಿಷ್ಠ 2,023 ಕೈದಿಗಳು ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದರೆ. ಹಾಸನ ಜಿಲ್ಲಾ ಕಾರಾಗೃಹದಲ್ಲಿ 344, ಕಲಬುರ್ಗಿಯಲ್ಲಿ 336 ಹಾಗೂ ತುಮಕೂರಿನಲ್ಲಿ 237 ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ 235 ಕೈದಿಗಳು ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಕೈದಿಗಳು ಗಂಭೀರ, ಸಾಮಾನ್ಯ ಮಾನಸಿಕ ಅಸಮತೋಲನ, ಮೂರ್ಛೆರೋಗ, ಮದ್ಯಸೇವನೆ, ತಂಬಾಕು, ಗಾಂಜಾ ಹಾಗೂ ನಶೆಯ ಪದಾರ್ಥಗಳ ಸೇವನೆಯಿಂದ ವಿಚಿತ್ರವಾಗಿ ವರ್ತಿಸುವವರಾಗಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ 2017ರ ಅನುಸಾರ ರಾಜ್ಯದಲ್ಲಿನ 46 ಜೈಲುಗಳಲ್ಲಿ 36 ಜೈಲುಗಳಲ್ಲಿರುವ ಎಲ್ಲ ಕೈದಿಗಳ ಮಾನಸಿಕ ಸ್ಥಿತಿಗಳನ್ನು ತಜ್ಞರು ಅಧ್ಯಯನ ನಡೆಸಿದ್ದಾರೆ. ಗದಗ ಮತ್ತು ಮಂಡ್ಯ ಜಿಲ್ಲೆ ಸೇರಿ 4 ತಾಲ್ಲೂಕು ಜೈಲುಗಳಲ್ಲಿ ಅಧ್ಯಯನ ಸದ್ಯ ಪ್ರಗತಿಯಲ್ಲಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಕೈದಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತ ಸಮಗ್ರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ ಎಂದು ಬೆಂಗಳೂರು ಕೇಂದ್ರ ಕಾರಾಗೃಹ ಮತ್ತು ಕಲಬುರ್ಗಿ ಕೇಂದ್ರ ಕಾರಾಗೃಹಗಳ ವೈದ್ಯಾಧಿಕಾರಿಗಳಿಗೆ ನಿರ್ದೇಶಿಸಿರುವ ನ್ಯಾಯಪೀಠ ವಿಚಾರಣೆ ಮುಂದೂಡಿದೆ.