ಚಿಕ್ಕಬಳ್ಳಾಪುರ: ಸಮರ್ಪಕವಾಗಿ ಸ್ಪಂದಿಸದ ರಾಷ್ಟ್ರೀಯ ಕೆಲ ಬ್ಯಾಂಕುಗಳಲ್ಲಿನ ಕೋಟ್ಯಂತರ ರೂ ನಿಶ್ಚಿತ ಠೇವಣಿ ವಾಪಸ್ ಪಡೆದು, ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿಡಲು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ದೇಶಕರು ಒತ್ತಾಯಿಸಿದರು.
ಎಪಿಎಂಸಿ ಮಾರುಕಟ್ಟೆಯಲ್ಲಿರುವ ರೈತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಸಿ.ರಾಮದಾಸು ಮಾತನಾಡಿ, ಕೆನರಾ ಬ್ಯಾಂಕಿನಲ್ಲಿ 40 ಲಕ್ಷ ರೂ ಮತ್ತು ಸ್ಟೇಟ್ ಬ್ಯಾಂಕ್ ಆ್ ಇಂಡಿಯಾದಲ್ಲಿ 1.10 ಕೋಟಿ ರೂಗಳನ್ನು ಮಾರುಕಟ್ಟೆಯ ಕೌನ್ಸಿಲ್ ಹೆಸರಿನಲ್ಲಿ ನಿಶ್ಚಿತ ಠೇವಣಿ ಇಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕರಾದ ಮುರುಳಿ ಮತ್ತು ಶ್ರೀನಿವಾಸನಾಯ್ಡು, ಬ್ಯಾಂಕುಗಳಲ್ಲಿ ಸಿಬ್ಬಂದಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಚೆಕ್ ಕೊಟ್ಟರೂ ಪುನಃ ವಾಪಸ್ ಕಳುಹಿಸುತ್ತಾರೆ. ಇದರ ಬದಲು ರೈತರು, ಮಹಿಳಾ ಸ್ನೇಹಿಯಾಗಿರುವ ಸಹಕಾರಿ ವಿವಿಧ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಇಡುವುದು ಒಳಿತು. ಇದರಿಂದ ಗ್ರಾಮೀಣ ಬ್ಯಾಂಕುಗಳು ಅಭಿವೃದ್ಧಿ ಹೊಂದುವುದರ ಜತೆಗೆ ಗುಣಮಟ್ಟದ ಸೇವೆ ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಬಹುತೇಕ ಸದಸ್ಯರು ಧ್ವನಿಗೂಡಿಸಿದರು.
ನಿರ್ದೇಶಕ ಕೆ.ಎಸ್.ಕೃಷ್ಣಾರೆಡ್ಡಿ ಮಾತನಾಡಿ, ಆಯಾ ನಿರ್ದೇಶಕರ ಮೂಲಕ ಮಾರುಕಟ್ಟೆಯ ರೈತರಿಗೆ ಕ್ರೇಟ್‌ಗಳ ವಿತರಣೆಯು ಚರ್ಚೆಗೆ ಮಾತ್ರ ಸೀಮಿತವಾಗಿದೆ. ಆದರೆ, ಇದು ಅನುಷ್ಠಾನಕ್ಕೆ ಬರುತ್ತಿಲ್ಲ. ಸುಮ್ಮನೆ ಕಾಲ ತಳ್ಳುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್ ಮತ್ತಿತರರು ಇದ್ದರು.
ಸಭೆಯಲ್ಲಿ ಚರ್ಚಿತ ವಿಷಯ: ಮಾರುಕಟ್ಟೆ ಪ್ರಾಂಗಣದಲ್ಲಿನ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಯಂತ್ರ ಬದಲಾವಣೆ, ನಂದಿ ಉತ್ಪನ್ನಗಳ ಮಾರಾಟದ ಅಂಗಡಿಗೆ ಜಾಗ ಮತ್ತು ಬಾಡಿಗೆ ನಿಗದಿ, ಇಂದಿರಾ ಕ್ಯಾಂಟಿನ್ ಮುಂಭಾಗದ ಕಟ್ಟೆಯಲ್ಲಿ ಹಾಳಾಗಿರುವ ಶೀಟುಗಳ ತೆರವು, ಪೆರೇಸಂದ್ರ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಿರುವ ಮಳಿಗೆ ಬಾಡಿಗೆ ನೀಡುವಿಕೆ, ಕುರಿ ಮತ್ತು ಮೇಕೆ ಸಂತೆಯ ಗಣಕಯಂತ್ರಣದ ಕೊಠಡಿಯ ಭದ್ರತೆಗೆ ಸಿಬ್ಬಂದಿ ನೇಮಕ, 2020-21 ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯ ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು ಸಾಮಾನ್ಯ ಮತ್ತು ಕಾಯಂ ನಿಧಿ ಮುಂಗಡ ಪತ್ರದ ಬಗ್ಗೆ ಚರ್ಚೆ ನಡೆಯಿತು.
ಎರಡು ತಿಂಗಳ ಲೆಕ್ಕ: ಬಾಡಿಗೆ, ಪರವಾನಗಿ, ದಂಡ, ಮಾಸಿಕ ಶುಲ್ಕ, ಕೃಷಿ ಪೇಟೆ ಚಂದಾ, ದಲ್ಲಾಲರ ಪರವಾನಗಿ ಸೇರಿ ಇತರೆ ಮೂಲಗಳಿಂದ ಕಳೆದ ಅಕ್ಟೋಬರ್‌ನಲ್ಲಿ 18,12,938 ರೂ ಮತ್ತು ನವೆಂಬರ್‌ನಲ್ಲಿ 18,32,926 ರೂ ಜಮಾ ಆಗಿದೆ. ಹಾಗೆಯೇ ರಾಜ್ಯ ಸಂಚಿತ ನಿಧಿ, ಕೃಷಿ ಮಾರಾಟ ಮತ್ತು ವಿಶ್ವವಿದ್ಯಾಲಯ ವಂತಿಕೆ, ಆವರ್ತ ನಿಧಿ, ಸ್ವಚ್ಛತೆ, ವಿವಿಧ ಅಭಿವೃದ್ಧಿ ಕೆಲಸ ಸೇರಿ ಇತರೆ ನಿರ್ವಹಣೆಗೆ ಕಳೆದ ಅಕ್ಟೋಬರ್‌ನಲ್ಲಿ 31,94,636 ರೂ ಮತ್ತು ನವೆಂಬರ್‌ನಲ್ಲಿ 5,82,382 ರೂ ಖರ್ಚಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಮಾಹಿತಿ ನೀಡಿದರು.