ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆ ಸಮಯದಲ್ಲಿ ಯಾರಾದರೂ ವಿರೋಧ ಮಾಡಿದರೆ ಅವರನ್ನು ಗಡಿಪಾರು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸರ್ಕಾರವನ್ನು ಒತ್ತಾಯಿಸಿದರು.
ನಾಡಹಬ್ಬ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದು, ಈ ಬಾರಿ ಲೇಖಕಿ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಹಲವರು ವಿರೋಧ ಮಾಡಿದ್ದಾರೆ. ಹಾಗಾಗಿ ಉದ್ಘಾಟನೆ ಸಮಯದಲ್ಲಿ ಮಾಜಿ ಸಂಸದ ಪ್ರತಾಪಸಿಂಹ ಸೇರಿದಂತೆ ಹಲವರು ಪ್ರತಿಭಟನೆ, ಕಪ್ಪುಪಟ್ಟಿ ಪ್ರದರ್ಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ದಸರೆ ವೇಳೆ ಏನಾದರೂ ಕಪ್ಪುಪಟ್ಟಿ ಪ್ರದರ್ಶಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕಿ ಜೈಲಿಗೆ ಕಳುಹಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಬಾರದೆಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಬಿಜೆಪಿಯವರು ನ್ಯಾಯಾಲಯದ ತೀರ್ಪು, ಜನರ ಮಾತಿಗೆ ಗೌರವದಿಂದ ಇರಬೇಕು. ಮತ್ತೆ ವಿರೋಧಿಸುವ ಕೆಲಸ ಮಾಡಿದರೆ ಗಡಿಪಾರು ಮಾಡಬೇಕು. ಪೊಲೀಸ್ ಆಯುಕ್ತರು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಭಾವನಾತ್ಮಕ ವಿಚಾರಗಳಿಂದ ಕೋಮುಗಲಭೆ ಉಂಟಾಗುವ ರೀತಿಯಲ್ಲಿ ಪ್ರಚೋದಿಸುತ್ತಿದ್ದಾರೆ. ಹಾಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿಗೆ ಒಂದು ಪೈಸೆ ಅಭಿವೃದ್ಧಿ ಕೆಲಸ ಮಾಡದೆ ಬರೀ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಯಾವುದಾದರೂ ಒಂದು ಯೋಜನೆ ತಂದಿಲ್ಲ, ಅನುದಾನ ಬಿಡುಗಡೆ ಮಾಡಿಸಿಲ್ಲ ಎಂದು ಟೀಕಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಕೇವಲ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದು, ಕುರುಬ ಹಾಗೂ ನಾಯಕ ಸಮಾಜದ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಮೂರು ಜಿಲ್ಲೆಗಳಲ್ಲಿ ಗೋಂಡ ಸಮಾಜದ ಸಮನಾಂತರ ಜಾತಿಗಳನ್ನು ಎಸ್‌ಟಿಗೆ ಸೇರಿಸಲಾಗುತ್ತಿದೆ. ಆದರೆ ನಾಯಕ ಸಮಾಜದ ಸವಲತ್ತುಗಳನ್ನು ಕಸಿದುಕೊಳ್ಳಲು ಎಸ್‌ಟಿಗೆ ಸೇರಿಸಲಾಗುತ್ತಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಹರಿಹಾಯ್ದರು.
ಕರ್ನಾಟಕದ ಕುರುಬರಲ್ಲಿ ಹತ್ತು ಉಪ ಜಾತಿಗಳಿವೆ. ಕೆಲವು ಕುರುಬ ಸಮುದಾಯವನ್ನು ಈಗಾಗಲೇ ಎಸ್‌ಟಿಗೆ ಸೇರಿಸಲಾಗಿದೆ. ಇದನ್ನು ತಿಳಿಸದೆ ಸಮುದಾಯದ ನಡುವೆ ಕಿತ್ತಾಟ ತರಲು ಷಡ್ಯಂತ್ರ ಮಾಡಿದ್ದಾರೆ ಎಂದು ದೂರಿದರು.
ಪ್ರತಾಪಸಿಂಹ ಚಾಮರಾಜ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಾನು ಈ ಬಾರಿ ಅವರ ವಿರುದ್ಧ ಸ್ಪರ್ಧೆ ಮಾಡಬೇಕೆಂಬ ಕಾರಣಕ್ಕಾಗಿಯೇ ಟಿಕೆಟ್ ತೆಗೆದುಕೊಂಡಿದ್ದೆ. ಚುನಾವಣೆಯಲ್ಲಿ ಟಿಕೆಟ್ ಸಿಗದೆ ಓಡಿ ಹೋದರು. ಮುಂದೆ ಗ್ರಾಪಂ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಸ್ಪರ್ಧಿಸಿದರೂ ನಾನು ಮುಖಾಮುಖಿಯಾಗಿ ಕಣಕ್ಕಿಳಿಯುವೆ ಎಂದರು.
ಬಿಜೆಪಿ ವಕ್ತಾರ ಎಂ.ಜಿ.ಮಹೇಶ್, ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಟೀಕಿಸುತ್ತಾರೆ. ಇದೇ ರೀತಿ ಮಾತನಾಡಿದರೆ ನಮ್ಮವರು ಅದಕ್ಕೆ ತಿರುಗೇಟು ನೀಡುವ ಕಾಲ ಬರುತ್ತದೆ. ಕರ್ನಾಟಕದಲ್ಲಿ ನಡೆಯುತ್ತಿರುವುದು ಜಾತಿ ಗಣತಿ ಅಲ್ಲ. ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಅಷ್ಟೇ. ಎಚ್.ಎಂ.ಕಾಂತರಾಜು ವರದಿ ಒಪ್ಪದಂತೆ ಬಿಜೆಪಿ ಆಗ್ರಹ ಮಾಡಿತ್ತು. ಈ ಸರ್ವೇಯಿಂದ ಜನರಿಗೆ ಅನುಕೂಲವಾಗುತ್ತದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್‌ನಾಯಕ, ವಕ್ತಾರ ಕೆ.ಮಹೇಶ್ ಇತರರಿದ್ದರು.