ಜಿಲ್ಲೆ

ಸಕಲೇಶ್‌ನನ್ನು ಗಡಿಪಾರು ಮಾಡಿ

ಎನ್.ವೆಂಕಟೇಶ್

ರೈತ ಸಂಘ, ಹಸಿರುಸೇನೆ ಒತ್ತಾಯ |  ತಹಸೀಲ್ದಾರ್‌ಗೆ ಮನವಿ

ಶಿಡ್ಲಘಟ್ಟ : ರೈತರ ಮೇಲೆ ಗುಂಡು ಹಾರಿಸಿ ಪ್ರಾಣ ಬೆದರಿಕೆ ಹಾಕಿದ ಉದ್ಯಮಿ ಸಕಲೇಶ್ ಕುಮಾರ್ ಮೇಲೆ ರೌಡಿಶೀಟರ್ ತೆಗೆಯಬೇಕು ಮತ್ತು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಕಾರ್ಯಕರ್ತರು ಶಿಡ್ಲಘಟ್ಟದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕು ಕಚೇರಿಗೆ ಆಗಮಿಸಿದ ರೈತರು ಕೆಲಕಾಲ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ರೌಡಿಯಂತೆ ವರ್ತಿಸಿ ರೈತರ ಮೇಲೆ ಗುಂಡು ಹಾರಿಸಿ ಪ್ರಾಣ ಬೆದರಿಕೆ ಹಾಕಿದ ಸಕಲೇಶ್ ಕುಮಾರ್ ವಿರುದ್ದ ಘೋಷಣೆಗಳನ್ನು ಕೂಗಿ ಆತನ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಪ್ರತೀಶ್ ಮಾತನಾಡಿ, ಮಂಚೇನಹಳ್ಳಿ ಸಮೀಪದ ಕನಗಾನಕೊಪ್ಪ ಬಳಿ ಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿದ್ದು ಅದನ್ನು ಸ್ಥಳೀಯರು ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ ಗಣಿಗಾರಿಕೆಗೆ ಅನುಮತಿ ಪಡೆದ ಸಕಲೇಶ್‌ಕುಮಾರ್ ಏಕಾಏಕಿ ರಸ್ತೆ ನಿರ್ಮಿಸಲು ಬಂದಾಗ ರೈತರು ವಿರೋಧಿಸಿದ್ದಾರೆ. ಇದರಿಂದ ಕುಪಿತಗೊಂಡ ಸಕಲೇಶ್ ಕುಮಾರ್ ತನ್ನ ಬಳಿಯಿದ್ದ ಗನ್‌ನಿಂದ ಅಲ್ಲಿದ್ದ ರೈತರ ಮೇಲೆ ಗುಂಡು ಹಾರಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಸ್ಥಳದಲ್ಲಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಕೂಡ ಇದ್ದು ಅವರ ಮೇಲೂ ದಬ್ಬಾಳಿಕೆ ನಡೆದಿದೆ. ರೌಡಿಯಂತೆ ವರ್ತಿಸಿದ್ದಾನೆ. ಹಾಗಾಗಿ ಅಲ್ಲಿ ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು.

ಸಕಲೇಶ್ ಕುಮಾರ್‌ನನ್ನು ಜಿಲ್ಲೆಗೆ ಕಾಲಿಡದಂತೆ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನಾಚಾರಿ, ಪದಾಧಿಕಾರಿಗಳಾದ ಆಂಜಿನಪ್ಪ, ಪ್ರಭು, ತಿಪ್ಪೇಗೌಡ, ಸುಬ್ರಮಣಿ, ವಾಸುದೇವಮೂರ್ತಿ, ಈರಪ್ಪ, ಪ್ರತಾಪ್ ಮೋಹನ್, ನಾಗರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.