ಟ್ಯಾಂಕರ್ ಮೂಲಕ ನೀರು ತಂದು ಕೃಷಿಹೊಂಡದಲ್ಲಿ ಸಂಗ್ರಹಿಸುತ್ತಿರುವುದು.  
ಜಿಲ್ಲೆ

ದ್ರಾಕ್ಷಿ ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ

ವಿಜಯವಾಣಿ ವಿಶೇಷ ಕನಕಗಿರಿ
ತಾಲೂಕು ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿದು ಬೋರ್‌ವೆಲ್‌ಗಳು ಬತ್ತಲಾರಂಭಿಸಿದ್ದರಿಂದ ಅಡವಿಬಾವಿ ವ್ಯಾಪ್ತಿಯಲ್ಲಿ ಬೆಳೆದ ದ್ರಾಕ್ಷಿ ತೋಟಗಳು ನೀರಿನ ಅಭಾವದಿಂದ ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಮುಂಗಾರು ಹಾಗೂ ಹಿಂಗಾರು ಮಳೆ ವೈಫಲ್ಯದಿಂದ ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ಬೆಳೆದ ಬೆಳೆಗಳು ಒಣಗಿ ಹೋಗಿವೆ. ಗೌರಿಪುರ ಗ್ರಾಪಂಗೆ ಒಳಪಡುವ ಅಡವಿಬಾವಿ, ದೊಡ್ಡ ತಾಂಡಾ, ಚಿಕ್ಕ ತಾಂಡಾಗಳಲ್ಲಿ 10-12ರೈತರು 50ಎಕರೆ ಪ್ರದೇಶದಲ್ಲಿ ಬೆಳೆದಿದ್ದ ದ್ರಾಕ್ಷಿ ಬೆಳೆ ಒಣಗಲಾರಂಭಿಸಿದೆ. ಈಗಾಗಲೇ 5ರಿಂದ 8 ವರ್ಷದ ಗಿಡಗಳಿದ್ದು, ಈ ವರ್ಷ ಮಳೆ ಕೊರತೆಯಿಂದ ಇಳುವರಿ ಕೊರತೆ ಜತೆಗೆ ಮಾರುಕಟ್ಟೆ ದರ ಕೂಡ ಕುಸಿದಿದೆ. ಇವೆರಡು ಹೊಡೆತಗಳ ನಡುವೆ ಇದೀಗ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದು ತೋಟಗಳಿಗೆ ನೀರು ಹರಿಸಲು ಸಮಸ್ಯೆಯಾಗಿದೆ.

ಹೇಗಾದರೂ ಮಾಡಿ ದ್ರಾಕ್ಷಿ ಬೆಳೆ ಉಳಿಸಿಕೊಳ್ಳಬೇಕೆಂದು ರೈತರು ಹೊಸದಾಗಿ 200, 300 ಅಡಿ ಬೋರ್‌ವೆಲ್ ಕೊರೆಯಿಸಿದರೂ ಹನಿ ನೀರು ಸಿಗದಿರುವುದು ಮತ್ತಷ್ಟು ಆತಂಕಕ್ಕೆ ದೂಡಿದೆ. ಈಗಾಗಲೇ ಕೆಲವು ತೋಟಗಳಲ್ಲಿನ ದ್ರಾಕ್ಷಿ ಗಿಡಗಳು ಒಣಗಿವೆ. ಆರ್ಥಿಕವಾಗಿ ಸದೃಢವಾಗಿರುವವರು ಟ್ಯಾಂಕರ್ ಮೂಲಕ ಗಿಡಗಳಿಗೆ ನೀರುಣಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಟ್ಯಾಂಕರ್ ನೀರು ತರಲು ನಾಲ್ಕೈದು ಕಿ.ಮೀ. ದೂರದ ಗ್ರಾಮಗಳನ್ನು ರೈತರು ಆಶ್ರಯಿಸಿದ್ದಾರೆ. 4 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ ತರಿಸಲು ಕನಿಷ್ಠ 2500 ರೂ. ಖರ್ಚಾಗುತ್ತಿದೆ. ಟ್ಯಾಂಕರ್ ಮೂಲಕ ತರುವ ನೀರನ್ನು ಕೃಷಿಹೊಂಡಗಳಿಗೆ ತುಂಬಿಸಿ ಡ್ರಿಪ್ ಮೂಲಕ ಹರಿಸುವ ಪ್ರಯತ್ನ ನಡೆದಿದೆ. ಆದರೆ, ಕೆಲ ರೈತರು ಏನು ಮಾಡಬೇಕೆಂದು ತಿಳಿಯದೇ ಕೈಚೆಲ್ಲಿ ಕುಳಿತಿದ್ದಾರೆ.

ಜಾಂಬವಂತನ ಕಾಟ: ಬೋರ್‌ವೆಲ್‌ಗಳಲ್ಲಿ ನೀರು ಕುಸಿತ ಒಂದೆಡೆಯಾದರೆ, ಲಭ್ಯ ನೀರನ್ನು ಡ್ರಿಪ್ ಮೂಲಕ ಹಾಯಿಸಲು ಕರಡಿಗಳ ಉಪಟಳ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕರಡಿಗಳಿಗೆ ಕುಡಿಯಲು ನೀರು ದೊರೆಯದೇ ರೈತರು ಅಳವಡಿಸಿರುವ ಪೈಪ್‌ಲೈನ್, ಡ್ರಿಪ್‌ಗಳನ್ನು ಕಿತ್ತು ಹಾಕುತ್ತಿದ್ದು, ದಿನನಿತ್ಯ ಜೋಡಿಸಲು ರೈತರು ರೋಸಿ ಹೋಗಿದ್ದಾರೆ.

ಖುದ್ದಾಗಿ ತೋಟಗಳಿಗೆ ತೆರಳಿ ಪರಿಶೀಲಿಸಲಾಗಿದೆ. ಡ್ರಿಪ್ ಮೂಲಕ ನಾಲ್ಕೈದು ಸಾಲುಗಳಿಗೊಂದರಂತೆ ಟ್ಯಾಪ್ ಅಳವಡಿಸಿಕೊಂಡು ನೀರು ಹಾಯಿಸಲು ರೈತರು ಮುಂದಾಗಬೇಕು. ಡ್ರಿಪ್ ಇಲ್ಲದಿದ್ದವರಿಗೆ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಟ್ಯಾಂಕರ್ ಖರೀದಿಗೆ ಸಹಾಯ ಧನ ನೀಡುವ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆಯಲ್ಲಿದ್ದು, ಒಪ್ಪಿಗೆ ಸೂಚಿಸಿದರೆ, ರೈತರಿಗೆ ಮಂಜೂರು ಮಾಡಲಾಗುವುದು.
ಮಹೇಶ, ಹಿರಿಯ ಸಹಾಯಕ ನಿರ್ದೇಶರು, ತೋಟಗಾರಿಕಾ ಇಲಾಖೆ, ಗಂಗಾವತಿ

ಅಂತರ್ಜಲ ಕುಸಿತದಿಂದ ಐದಾರು, ಎಂಟತ್ತು ವರ್ಷಗಳಿಂದ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿರುವ ದ್ರಾಕ್ಷಿ ಗಿಡಗಳು ನೀರಿಲ್ಲದೆ ಕಣ್ಣೆದುರೇ ಒಣಗುತ್ತಿರುವುದು ಶೋಚನಿಯ. ಈ ವರ್ಷ ಹೇಗಾದರೂ ಮಾಡಿ ಗಿಡಗಳನ್ನು ಉಳಿಸಿಕೊಳ್ಳಬೇಕಿದೆ. ಆದರೆ, ಅಕ್ಕಪಕ್ಕದ ಬೋರ್‌ವೆಲ್‌ಗಳಲ್ಲಿ ನೀರಿಲ್ಲ. ಕೆಲವರು ಬೇರೆಡೆಯಿಂದ ನೀರು ತರುತ್ತಿದ್ದಾರೆ. ಇದರಿಂದ ಸರ್ಕಾರವೇ ನಮಗೆ ದಾರಿ ತೋರಬೇಕಿದೆ.ದಾನಪ್ಪ, ಮಲ್ಲಪ್ಪ, ಅಮರೇಶ ರಾಠೋಡ್, ದ್ರಾಕ್ಷಿ ಬೆಳೆಗಾರರು