ಕುಷ್ಟಗಿಯ ಗುರುಭವನದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಕುರಿತು ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಶಾಸಕ ದೊಡ್ಡನಗೌಡ ಪಾಟೀಲ್ ಉದ್ಘಾಟಿಸಿದರು. ಡಯಟ್‌ನ ಪ್ರಾಚಾರ್ಯ ಕೃಷ್ಣಮೂರ್ತಿ, ಬಿಇಒ ಸುರೇಂದ್ರ ಕಾಂಬ್ಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ನೀಲನಗೌಡ ಹೊಸಗೌಡ್ರ, ನೌಕರರ ಸಂಘದ ಅಧ್ಯಕ್ಷ ಬಾಲಾಜಿ ಬಳಿಗಾರ ಇತರರು ಇದ್ದರು. 
ಜಿಲ್ಲೆ

ಇಲಾಖೆ, ಶಿಕ್ಷಕರ ಮಧ್ಯೆ ಸಮನ್ವಯತೆ ಇರಲಿ

Kopala - Desk - Eraveni

ಕುಷ್ಟಗಿ: ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರ ಮಧ್ಯೆ ಸಮನ್ವಯತೆ ಇದ್ದಾಗ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ಮಾಹಿತಿ ಹಕ್ಕು ಅಧಿನಿಯಮ ಕುರಿತು ಪಟ್ಟಣದ ಗುರುಭವನದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಶಿಕ್ಷಕ ವೃತ್ತಿ ಬೇರೆಲ್ಲ ವೃತ್ತಿಗಳಿಗಿಂತ ಪವಿತ್ರವಾದುದು. ವೃತ್ತಿಗೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಕ ದಾರಿ ತಪ್ಪಿದರೆ ಮಕ್ಕಳ ಭವಿಷ್ಯ ಅತಂತ್ರವಾಗುತ್ತದೆ. ಶಿಕ್ಷಕರು ವಿವಿಧ ಕಾನೂನುಗಳ ಬಗ್ಗೆ ತಿಳಿದಿರಬೇಕು.

ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ಮಾಹಿತಿ ಇದ್ದರೆ ಮಾಹಿತಿ ಕೇಳುವ ನೆಪದಲ್ಲಿ ವಿನಾ ಕಾರಣ ತೊಂದರೆ ನೀಡುವವರಿಗೆ ಸಮರ್ಥವಾಗಿ ಉತ್ತರಿಸಲು ಸಾಧ್ಯವಾಗುತ್ತದೆ.

ಕೆಲ ಮಾಹಿತಿ ಹಕ್ಕು ಕಾರ್ಯಕರ್ತರಿಂದಾಗಿ ಶಿಕ್ಷಕರು ಶಾಲೆಯ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಕಾರ್ಯಕರ್ತರೊಂದಿಗೆ ಇಲಾಖೆಯ ಅಧಿಕಾರಿಗಳೂ ಶ್ಯಾಮೀಲಾಗಿ ಅಧಿನಿಯಮದ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಬೇಡವಾದ ಶಿಕ್ಷಕರನ್ನು ಗುರಿಯಾಗಿಸಿಕೊಂಡು ಅವರಿಗೆ ಮಾಹಿತಿ ಹಕ್ಕು ಕಾರ್ಯಕರ್ತರಿಂದ ಕಿರುಕುಳ ನೀಡುತ್ತಿದ್ದಾರೆ. ಇಂತಹ ಪ್ರಕರಣಗಳು ಕಂಡುಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.