ಬೆಳಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕವಲೂರು ಕ್ಲಸ್ಟರ್ ಮಟ್ಟದ ಮುಖ್ಯ ಶಿಕ್ಷಕರ ಸಭೆ ನಡೆಯಿತು. ಮುಖ್ಯ ಶಿಕ್ಷಕ ವೀರಣ್ಣ ಮಟ್ಟಿ ಮಾತನಾಡಿದರು.  
ಜಿಲ್ಲೆ

ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತನ್ನಿ

ಶಶಿಧರ ಎಲ್

ಅಳವಂಡಿ: ಸಮೀಪದ ಬೆಳಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಲಾಖಾ ಮಟ್ಟದ ಕಾರ್ಯಕ್ರಮ ಅನುಷ್ಟಾನ ಹಾಗೂ 2023-24ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆ ಆಯೋಜನೆ ಕುರಿತು ಬುಧವಾರ ಕವಲೂರು ಕ್ಲಸ್ಟರ್ ಮಟ್ಟದ ಮುಖ್ಯ ಶಿಕ್ಷಕರರೊಂದಿಗೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಕವಲೂರು ಕ್ಲಸ್ಟರ್‌ನ ಸಿಆರ್‌ಪಿ ವೀರೇಶ ಕೌಟಿ ಮಾತನಾಡಿ, ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಎಲ್ಲ ಕಾರ್ಯಕ್ರಮಗಳನ್ನು ಮುಖ್ಯ ಶಿಕ್ಷಕರು ಅನುಷ್ಟಾನಕ್ಕೆ ತರಬೇಕು. ಇಲಾಖೆಯ ಕಾರ್ಯಕ್ರಮಗಳ ಜಾರಿಯಲ್ಲಿ ಲೋಪವಾಗದಂತೆ ಕಾರ್ಯನಿರ್ವಹಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ವೀರಣ್ಣ ಮಟ್ಟಿ ಮಾತನಾಡಿ, ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಯಾವುದೇ ಲೋಪವಾಗದಂತೆ ನಡೆಸಬೇಕು. ಈ ಕಾರ್ಯಕ್ರಮಕ್ಕೆ ಎಸ್ಡಿಎಂಸಿ, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಹಕಾರ ಪಡೆದು ನಡೆಸಬೇಕು.

ಈ ಕಾರ್ಯಕ್ರಮಕ್ಕೆ ಎಲ್ಲ ಶಾಲೆಗಳ ಶಿಕ್ಷಕರ ಸಹಕಾರವೂ ಮುಖ್ಯ. ಮಕ್ಕಳು ಎಲ್ಲ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಬೇಕೆಂದರು.

ನಂತರ 2023-24ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಸೆ.21ರಂದು ಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೇತೃತ್ವದಲ್ಲಿ ನಡೆಸಲು ಒಪ್ಪಿಗೆ ನೀಡಲಾಯಿತು.

ಮುಖ್ಯ ಶಿಕ್ಷಕರಾದ ಬಸಪ್ಪ ಎಲಿಸೂರ, ಗಿರಿಯಪ್ಪ ಹಮ್ಮಗಿ, ಹನುಮಂತಪ್ಪ ಬೀಳಗಿ, ಮಹಮ್ಮದ್ ರಫಿ, ಮಂಜುನಾಥ ಕಮತರ, ಹನುಮಂತಪ್ಪ ಗುಡಿ, ಅಶೋಕ ಬಾರಕೇರ, ಹನುಮಪ್ಪ ಕರಿಗಾರ, ಅನಸೂಯಾ ಕಣವಿ ಇದ್ದರು.