ಜಿಲ್ಲೆ

ಗುಣಮಟ್ಟದ ಶಿಕ್ಷಣ ನೀಡಿಕೆಯತ್ತ ಗಮನ

ಚನ್ನಗಿರಿ: ಮೌಲ್ಯಾಂಕನದ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ನ್ಯೂನತೆ, ಪ್ರಗತಿ ತಿಳಿದುಕೊಂಡು ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಲಿಕಾ ಕೊರತೆ ನೀಗಿಸಲು ಶಿಕ್ಷಕರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಮತ್ತು ಪಾಲಕರು- ಮಕ್ಕಳಿಗೆ ಮಾಹಿತಿ ನೀಡಬೇಕು ಎಂದು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪ್ರಸನ್ನಕುಮಾರ್ ಸಂತೇಬೆನ್ನೂರು ಹೇಳಿದರು.

ಇಲ್ಲಿನ ನವಚೇತನ ಶಾಲೆಯಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಮತ್ತು ಸಹ ಶಿಕ್ಷಕರ ಸಮನ್ವಯ ಸಾಧಿಸುವ ಪ್ರಾಯೋಗಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಇತ್ತೀಚೆಗೆ ಶಾಲೆಗಳಲ್ಲಿ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳು ಅಧಿಕವಾಗಿವೆ. ಶಿಕ್ಷಕರು ಮಕ್ಕಳ ಮನಸ್ಸನ್ನು ಅರಿತು ಕಲಿಕೆಯಲ್ಲಿ ಆಸಕ್ತಿ ತೋರುವಂತೆ ಪ್ರಯತ್ನ ನಡೆಸಿದರೆ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಸುಲಭವಾಗಿ ಪಡೆಯಬಹುದು ಎಂದರು.

ಶಿಕ್ಷಕರಲ್ಲಿ ಇರುವ ಪರೀಕ್ಷೆ ಭಯ ವಿದ್ಯಾರ್ಥಿಗಳಲ್ಲಿ ಇಲ್ಲದಂತಾಗಿದೆ. ಶಿಕ್ಷಣ ಇಲಾಖೆ ಈ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಪಾಸಾಗಲು ಶೇ.33 ಅಂಕಕ್ಕೆ ಸಡಿಲೀಕರಣಗೊಳಿಸಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಫಲರಾಗುತ್ತಾರೆ. ಆದರೆ ಆಂಗ್ಲಮಾಧ್ಯಮದಲ್ಲಿ ಕಲಿತವರು ಸುಲಭವಾಗಿ ಪಾಸಾಗುತ್ತಾರೆ. ಆದ್ದರಿಂದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಕಡೆಗೆ ಶಿಕ್ಷಕರು ಗಮನ ಹರಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ. ಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ರಾಮಚಂದ್ರಪ್ಪ, ಸುರೇಶ್, ರಮೇಶ್, ಹನುಮಂತಪ್ಪ, ಸುಧೀರ್, ಮುಖ್ಯಶಿಕ್ಷಕಿ ಓಪೀಲಿಯ ಇದ್ದರು.