ಕಲಾದಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಗಮವಾಗಿ, ಭಯ ಮುಕ್ತವಾಗಿ ಹಾಗೂ ಕಟ್ಟುನಿಟ್ಟಾಗಿ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಬಾಗಲಕೋಟೆ ಕ್ಷೇತ್ರ ಶಿಕ್ಷಣಾಧಶಕಾರಿ ಎಂ.ಎಸ್. ಬಡದಾನಿ ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಾದ ಗ್ರಾಮದ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಹಾಗೂ ಗುರುಲಿಂಗೇಶ್ವರ ಪ್ರೌಢಶಾಲೆಯಲ್ಲಿನ ಪರೀಕ್ಷಾ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ನಕಲು ಮುಕ್ತ ಪರೀಕ್ಷೆ ನಡೆಸಲು ಇಲಾಖೆ ಸನ್ನದ್ಧವಾಗಿದೆ ಎಂದರು.
ಕಳೆದ ವರ್ಷದಿಂದ ಜಾರಿಗೆ ಬಂದಿರುವ ವೆಬ್‌ಕಾಸ್ಟಿಂಗ್ ಮತ್ತಷ್ಟು ಸುಧಾರಣೆಯೊಂದಿಗೆ ಈ ಬಾರಿಯೂ ಚಾಲ್ತಿಯಲ್ಲಿರುತ್ತದೆ. ತಾಲೂಕಿನಲ್ಲಿ, ಜಿಲ್ಲಾ ಹಾಗೂ ರಾಜ್ಯದ ಕೇಂದ್ರದಲ್ಲಿ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳ ಮೇಲೆ ಹದ್ದಿನ ಕಣ್ಣೀಡಲಿದ್ದಾರೆ. ಎಒನ್ ತಂತ್ರಜ್ಞಾನದ ಮೂಲಕ ಬೆಂಗಳೂರಿನ ಕೇಂದ್ರದಲ್ಲಿ ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡಲು ಕ್ರಮವಹಿಸಲಾಗಿದೆ ಎಂದರು.
ತಾಲೂಕಿನ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ 4,851 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಹೆಚ್ಚಿರುವ ಬಿಸಿಲಿನ ತಾಪಕ್ಕೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಿರುವಂತೆ ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಪ್ಯಾನ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಒಆರ್‌ಎಸ್ ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.
ತಾಲೂಕು ಅಕ್ಷರದಾಸೋಹದ ಅಧಿಕಾರಿ ನಾಗರಾಜ ದೇಶಪಾಂಡೆ, ಕೇಂದ್ರದ ಮುಖ್ಯ ಅಧೀಕ್ಷಕ ಎಂ.ವಿ. ಕೀರಣ್ಣವರ, ಸಹಾಯಕ ಅಧೀಕ್ಷಕ ಎಂ.ಎನ್. ಗಡಗಿ ಇದ್ದರು.