ಚಳ್ಳಕೆರೆ: ವಿವಿಧ ಇಲಾಖೆಗಳ ವಾರ್ಷಿಕ ಖರ್ಚಿನ ಅನುದಾನದ ಜತೆಗೆ ಹೆಚ್ಚುವರಿಯಾಗಿ 2.40 ಲಕ್ಷ ರೂ. ಬಿಡುಗಡೆ ಸೌಲಭ್ಯವನ್ನು ಸರ್ಕಾರ ಪ್ರಸ್ತುತ ರದ್ದುಪಡಿಸಿದ್ದು, ಇದರಿಂದ ಅಗತ್ಯ ತುರ್ತು ಕಾರ್ಯಗಳಿಗೆ ತೊಂದರೆಯಾಗಿದೆ ಎಂದು ತಾಪಂ ಇಒ ಎಚ್.ಶಶಿಧರ ಹೇಳಿದರು.
ತಾಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ತುರ್ತಾಗಿ 20 ಶಾಲಾ ಕೊಠಡಿಗಳು ಅವಶ್ಯಕವಿದೆ ಎಂದು ಹೇಳಿದರು.
ಪ್ರತಿಕ್ರಿಯಿಸಿದ ತಾಪಂ ಆಡಳಿತಾಧಿಕಾರಿ ಡಾ.ಬಿ.ಮಂಜುನಾಥ, ಬೆಳೆ, ಮನೆ ಮತ್ತು ಸರ್ಕಾರಿ ಆಸ್ತಿ ಹಾನಿಗೆ ಪರಿಹಾರ ಮೊತ್ತದ ಜತೆಗೆ ತುರ್ತು ಕೆಲಸಗಳು ಹಾಗೂ ಶಾಲಾ ಕೊಠಡಿಗಳ ದುರಸ್ತಿ ಹಾಗೂ ಕಟ್ಟಡಗಳ ಕೊರತೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ತಿಪ್ಪೇಸ್ವಾಮಿ ಮಾಹಿತಿ ನೀಡಿ, ಕಳೆದ ವರ್ಷ ಬಿಡುಗಡೆಯಾದ 10.16 ಲಕ್ಷ ರೂ. ಅನುದಾನ ಸಿಬ್ಬಂದಿ ವೇತನ ಮತ್ತಿತರ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಬಿಸಿಯೂಟ ಯೋಜನೆಗೆ ಪ್ರತ್ಯೇಕ ಕೊಠಡಿಗಳ ಅನುಕೂಲಬೇಕು. ಈಗಾಗಲೇ ಪಿ.ಮಹದೇವಪುರದಲ್ಲಿ ಗ್ರಾಪಂ ವತಿಯಿಂದ ನಿರ್ಮಿಸಿಕೊಂಡಿರುವಂತೆ ಪ್ರತಿ ಪಂಚಾಯಿತಿ ಹಂತದಲ್ಲಿ ನಿರ್ಮಿಸಿಕೊಡಲು ಕ್ರಮವಹಿಸಬೇಕೆಂದು ಮನವಿ ಮಾಡಿಕೊಂಡರು.
ಶಶಿಧರ್ ಮಾತನಾಡಿ, ಬಿಸಿಯೂಟ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಮೂಲ ಸೌಕರ್ಯಕ್ಕೆ ವಿಳಂಬ ಮಾಡದೆ ವಾರ್ಷಿಕವಾಗಿ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಟಿ.ಕುಸುಮಾ ಮಾತನಾಡಿ, ತಾಲೂಕಿನಲ್ಲಿ 38,311 ಕಾರ್ಮಿಕರ ನೋಂದಣಿ ಬಾಕಿ ಇದೆ ಎಂದಾಕ್ಷಣ, ಪ್ರತಿಕ್ರಿಯಿಸಿದ ಡಾ.ಬಿ.ಮಂಜುನಾಥ, ತಮ್ಮ ಇಲಾಖೆಗೆ ಶಾಸಕರು ಸೂಚಿಸಿರುವಂತೆ 50 ಸಾವಿರಕ್ಕೂ ಹೆಚ್ಚು ಕಾರ್ಮಿಕರ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಕಾರ್ಮಿಕರ ಕುಟುಂಬಗಳು ಆರೋಗ್ಯ, ಶಿಕ್ಷಣ ಮತ್ತು ಅಪಘಾತ ಸಮಸ್ಯೆಗಳಿಗೆ ಬಹಳಷ್ಟು ಅನುಕೂಲವಿದೆ. ನಗರ ಮತ್ತು ಹಳ್ಳಿಗಳಲ್ಲಿ ಹೆಚ್ಚು ಪ್ರಚಾರ ನಡೆಸಿ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ ಮಾತನಾಡಿ, ನಾಯಕನಹಟ್ಟಿ ವ್ಯಾಪ್ತಿಯಲ್ಲಿ 11 ಮಂದಿ ಸೇರಿ ನಗರದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಎಚ್‌ಐವಿ ಸೋಂಕಿತರು ಕಂಡುಬಂದಿದ್ದಾರೆ. ತಾಲೂಕಿನಲ್ಲಿ 30 ಡೆಂೆ ಪ್ರಕರಣಗಳಿವೆ. ಗೋಪನಹಳ್ಳಿ, ಸಿದ್ದೇಶ್ವರನದುರ್ಗ ಸೇರಿದಂತೆ ಇತರ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಂಪೌಂಡ್ ವ್ಯವಸ್ಥೆ ಆಗಬೇಕಿದೆ ಎಂದು ತಿಳಿಸಿದರು.
ತಾಪಂ ವ್ಯವಸ್ಥಾಪಕ ಕೆಂಚಪ್ಪ, ಸಹಾಯಕ ನಿರ್ದೇಶಕ ಜಿ.ಎನ್. ಸಂಪತ್‌ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.