ಜಿಲ್ಲೆ

ಉತ್ತಮ ಮನಸ್ಸಿನಿಂದ ಶೈಕ್ಷಣಿಕ ಪ್ರಗತಿ ಸಾಧ್ಯ...

ಉಡುಪಿ ಡಿಡಿಪಿಐ ಲೋಕೇಶ ಅಭಿಪ್ರಾಯ

ದಂತ ತಪಾಸಣೆ ಕಾರ್ಯಕ್ರಮ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದ್ಯಾರ್ಥಿಗಳು ತಮ್ಮ ಬಾಯಿಯ ಆರೋಗ್ಯ ಹಾಗೂ ಹಲ್ಲಿನ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು. ಸದೃಢ ದೇಹ, ಉತ್ತಮ ಮನಸ್ಸು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಲೋಕೇಶ ಅಭಿಪ್ರಾಯಪಟ್ಟರು.

ಉಡುಪಿಯ ಒಳಕಾಡುನಲ್ಲಿರುವ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಸೌತ್​ ಶಾಲಾ ಹಳೆಯ ವಿದ್ಯಾರ್ಥಿ ಸಂಘ ಒಳಕಾಡು, ಉಭಯ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಸಹಕಾರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದಂತ ಉಚಿತ ತಪಾಸಣೆ ಹಾಗೂ ಸಲಹಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಣಿಪಾಲ ದಂತ ಮಹಾವಿದ್ಯಾಲಯದ ಹಿರಿಯ ದಂತ ವೈದ್ಯ ಡಾ.ಜೀವನ್​ ಮಾತನಾಡಿ, ಹಲ್ಲಿನ ಆರೋಗ್ಯ ಹಾಗೂ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.

ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ ಶೇಟ, ಉಭಯ ಶಾಲಾ ಎಸ್​ಡಿಎಂಸಿ ಅಧ್ಯಕ್ಷರಾದ ರಮೇಶ ಹೆಗಡೆ ಹಾಗೂ ಡಾ.ವಿರೂಪಾಕ್ಷ, ಜಿಪಂ ಶಿಕ್ಷಣ ಸಮಿತಿಯ ಗೌರವ ಸಲಹೆಗಾರ ಎಂ.ಆರ್​. ಹೆಗಡೆ ಉಪಸ್ಥಿತರಿದ್ದರು.

ಮಣಿಪಾಲ ದಂತ ಮಹಾವಿದ್ಯಾಲಯದ ತಜ್ಞ ವೈದ್ಯರ ತಂಡವು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಎಲ್ಲ ವಿದ್ಯಾರ್ಥಿಗಳ ಬಾಯಿ ಹಾಗೂ ಹಲ್ಲಿನ ತಪಾಸಣೆ ನಡೆಸಿ, ಅಗತ್ಯ ಸಲಹೆ ನೀಡಿತು.

ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಕುಸುಮಾ ವಂದಿಸಿದರು. ಸಹ ಶಿಕ್ಷಕಿ ಮಾಲಿನಿ ಕಾರ್ಯಕ್ರಮ ನಿರೂಪಿಸಿದರು.