ರಾಮನಗರ : ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಗೆ ನಿಷೇಧ, ರೈತ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ವಿಫಲವಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳ ವಿರುದ್ಧ ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದ ರೈತಪರ, ಕನ್ನಡಪರ, ದಲಿತಪರ ಸಂಘಟನೆ ಮುಖಂಡರನ್ನು ಪೋಲೀಸರು ಬಂಧಿಸಿದ ಘಟನೆ ಸೋಮವಾರ ನಡೆಯಿತು.
ರೈತರ ವಿವಿಧ ಸಮಸ್ಯೆಗಳು, ಭ್ರಷ್ಟಾಚಾರ, ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆಗೆ ನಿಷೇಧ ಸೇರಿದಂತೆ ೩೨ ಹಕ್ಕೋತ್ತಾಯಗಳನ್ನು ಮುಂದಿಟ್ಟುಕೊAಡು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ, ಕನ್ನಡಪರ, ದಲಿತಪರ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು.
ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಭಟನೆಗೆ ನಿಷೇಧ ಏರಿರುವ ಕಾರಣ ರೇಷ್ಮೆ ಕಛೇರಿ ಆವರಣದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರನ್ನು ಪೋಲೀಸರು ಜಿಲ್ಲಾಧಿಕಾರಿಗಳ ಕಛೇರಿ ಗೇಟಿನಲ್ಲೇ ತಡೆದರು. ಪ್ರತಿಭಟನಾಕಾರರು ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲೇ ಕುಳಿತು ಜಿಲ್ಲಾಧಿಕಾರಿಗಳ ನಡೆ ವಿರುದ್ಧ ಆಕ್ರೋಶ ಹೊರಹಾಕಿ ಪ್ರತಿಭಟಿಸಿದರು.
ಇದೇ ವೇಳೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಛೇರಿ ಒಳಗೆ ಬಿಡಬೇಕು ಎಂದು ಪೋಲೀಸರ ಜೊತೆ ಆಗಿಂದಾಗ್ಗೆ ಮಾತಿನ ಚಕಮಕಿ ನಡೆಸುತ್ತಿದ್ದು. ಪೋಲೀಸರು ಸೂಕ್ತ ಬಂದೋಬಸ್ತ್ ಮಾಡಿ ಜಿಲ್ಲಾಧಿಕಾರಿ ಕಛೇರಿಯ ಎರಡೂ ಗೇಟ್‌ಗಳನ್ನು ಬಂದ್ ಮಾಡಿ ಒಳಗಡೆ ಪ್ರತಿಭಟನಾಕಾರರು ಹೋಗದಂತೆ ದಿಗ್ಬಂಧನ ಹೇರಿದ್ದರು.
ಪ್ರತಿಭಟನಾ ಸ್ಥಳದಿಂದ ಮೇಲೇಳುವುದಿಲ್ಲ ನಮ್ಮ ಬೇಡಿಕೆ ಈಡೇರುವವರೆಗೆ ಇಲ್ಲೇ ಕೂರುತ್ತೇವೆ. ಪ್ರತಿಭಟನೆ ನಡೆಸಬೇಡಿ ಎಂಬುದು ಸರಿಯಲ್ಲ. ನಮ್ಮ ಸಮಸ್ಯೆಗೆ ಪರಿಹಾರ ನೀಡುವ ವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕೂತರು. ಎರಡು ಗಂಟೆಯಾದರೂ ಪ್ರತಿಭಟನಾಕಾರರು ಧರಣಿ ಮುಂದುವರೆಸಿ ಜಿಲ್ಲಾಧಿಕಾರಿಗಳ ಕಛೇರಿ ಒಳಗೆ ಬಿಡಿ ಎಂದು ಪ್ರತಿಭಟಿಸುತ್ತಿದ್ದರಿಂದ ಪೋಲೀಸರು ಮುನ್ನೆಚ್ಚರಿಕೆಯಾಗಿ ರೈತ ಮುಖಂಡರು, ಕನ್ನಡಪರ ಸಂಘಟನೆ, ದಲಿತ ಮುಖಂಡರನ್ನು ಬಂಧಿಸಿ ಸ್ಥಳದಿಂದ ಕರೆದೊಯ್ದರು.