ಜಿಲ್ಲೆ

ಡೆಂಘೆ ನಿರ್ವಹಣೆಗೆ ವಾರ್ ರೂಮ್ : ಆರೋಗ್ಯ ಇಲಾಖೆ ಮೇಲ್ವಿಚಾರಣೆ

ಪಂಕಜ ಕೆ.ಎಂ.

ಬೆಂಗಳೂರು: ರಾಜ್ಯದಲ್ಲಿ ಡೆಂಘೆ ಜ್ವರ ನಿಯಂತ್ರಿಸಲು ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆಗೆ ವಾರ್ ರೂಮ್ ಪ್ರಾರಂಭಿಸಿ, ಡೆಂಘೆಪೀಡಿತರ ಮೇಲೆ 14 ದಿನಗಳ ಕಾಲ ನಿಗಾ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಸುತ್ತೋಲೆ ಹೊರಡಿಸಿದ್ದಾರೆ.

ಆರೋಗ್ಯಸೌಧದಲ್ಲಿರುವ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ (ಎನ್‌ವಿಬಿಡಿಸಿಪಿ) ವಿಭಾಗವು ರಾಜ್ಯಮಟ್ಟದ ವಾರ್ ರೂಮ್ ಉಸ್ತುವಾರಿ ಹೊಂದಿರಲಿದೆ. ಎಲ್ಲ ಜಿಲ್ಲೆಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೆ ಜ್ವರ ಪರಿಸ್ಥಿತಿ ಮೇಲ್ವಿಚಾರಣೆ ಹಾಗೂ ದತ್ತಾಂಶ ಸಂಗ್ರಹಣೆಗೆ ಕಂಟ್ರೋಲ್ ರೂಮ್ ಅಥವಾ ಡೆಂಘೆ ವಾರ್ ರೂಮ್ ಸಕ್ರಿಯಗೊಳಿಸುವಂತೆ ತಿಳಿಸಿದ್ದಾರೆ.

ಪರಿಸ್ಥಿತಿ ಕುರಿತು ನಿಗಾ ಇರಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಬೇಕು. ಈ ಕಾರ್ಯಪಡೆ ವಾರಕ್ಕೊಮ್ಮೆ ಸಭೆ ನಡೆಸಿ, ಸಂಬಂಧಪಟ್ಟವರಿಗೆ ಸಲಹೆ- ಸೂಚನೆ ನೀಡಬೇಕು ಎಂದು ಸೂಚಿಸಿದ್ದಾರೆ.

ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಅಧಿಕ ಪ್ರಕರಣಗಳು ವರದಿಯಾದ ಪ್ರದೇಶ ಗುರುತಿಸಿ, ವಿವರವನ್ನು ರಾಜ್ಯ ಮಟ್ಟದ ವಾರ್ ರೂಮ್‌ಗೆ ಸಲ್ಲಿಸಬೇಕು. ಅಲ್ಲಿ ಲಾರ್ವಾ ನಾಶ ಚಟುವಟಿಕೆಗಳನ್ನು ತೀವ್ರಗೊಳಿಸಿ, ಆ ಪ್ರದೇಶಗಳಲ್ಲಿ ಜ್ವರ ಕ್ಲಿನಿಕ್‌ಗಳನ್ನು ತುರ್ತಾಗಿ ಪ್ರಾರಂಭಿಸಬೇಕು. ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆ ನಿರೋಧಕ ಬೇವಿನ ಎಣ್ಣೆಯ ವಿತರಣೆ ಖಚಿತಪಡಿಸಿಕೊಳ್ಳಬೇಕು ಎಂದು ತಾಕೂತು ಮಾಡಿದ್ದಾರೆ.

ಹಾಸಿಗೆ ಮೀಸಲು: ಡೆಂಘೆ ಜ್ವರ ಪ್ರಕರಣಗಳ ಅಗತ್ಯ ನಿರ್ವಹಣೆಗೆ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5 ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಗಳನ್ನು ಮೀಸಲಿಡಬೇಕು. ಪರೀಕ್ಷೆ, ಚಿಕಿತ್ಸೆ ಹಾಗೂ ನಿರ್ವಹಣೆ ಸೌಲಭ್ಯವನ್ನು ಇಲಾಖೆ ವ್ಯಾಪ್ತಿಯಲ್ಲಿನ ವೈದ್ಯಕೀಯ ಸಂಸ್ಥೆಗಳಲ್ಲಿ ಉಚಿತವಾಗಿ ಒದಗಿಸಬೇಕು ಎಂದು ಹರ್ಷ ಗುಪ್ತ ತಿಳಿಸಿದ್ದಾರೆ.

ಔಷಧ ದಾಸ್ತಾನು: ಎಲ್ಲ ವೈದ್ಯಕೀಯ ಸಂಸ್ಥೆಗಳಲ್ಲಿ ಪರೀಕ್ಷೆ ಕಿಟ್‌ಗಳು ಹಾಗೂ ಔಷಧ ದಾಸ್ತಾನು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಎಲ್ಲ ಮನೆಗಳು, ಶಾಲಾ- ಕಾಲೇಜು, ಕಚೇರಿಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಈಡಿಸ್ ಲಾರ್ವಾ ಸಮೀಕ್ಷೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.