ಜಿಲ್ಲೆ

ಡೆಂಘೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ :ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಡೆಂಘೆ ಪ್ರಕರಣ ತಡೆಗಟ್ಟಲು ನಗರದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದ್ದು, 700 ಸ್ವಯಂಸೇವಕರು ಹಾಗೂ 240 ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ’ ಎಂಬ ಡೆಂಘೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ದೃಢಪಡುತ್ತಿರುವ ಒಟ್ಟು ಡೆಂಘೆ ಪ್ರಕರಣಗಳಲ್ಲಿ ಶೇ. 40-50 ಬೆಂಗಳೂರಿನಲ್ಲಿಯೇ ವರದಿಯಾಗುತ್ತಿವೆ. ಈ ಬಗ್ಗೆ ನಾಗರಿಕರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳು, ನೀರು ನಿಲ್ಲುವ ಪ್ರದೇಶಗಳಲ್ಲಿ ಡೆಂಘೆ ಹರಡುವ ಸೊಳ್ಳೆಗಳ ನಿಯಂತ್ರಕ್ಕೆ ಕ್ರಮ ವಹಿಸಲಾಗುತ್ತಿದೆ. ಸಾರ್ವಜನಿಕರೂ ಸ್ವಯಂಪ್ರೇರಿತರಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬೆಂಗಳೂರನ್ನು ಡೆಂಘೆಮುಕ್ತವಾಗಿಸಲು ಸ್ವಯಂಸೇವಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಉತ್ತಮ ರೀತಿ ಕಾರ್ಯನಿರ್ವಹಿಸಬೇಕು ಎಂದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಜ್ಯ ನಿರ್ದೇಶಕ ಡಾ. ವೈ. ನವೀನ್ ಭಟ್, ಇಲಾಖೆ ಅಧಿಕಾರಿಗಳು ಇದ್ದರು.

ಬಾಕ್ಸ್

ಮನೆ ಮನೆ ಭೇಟಿ

ರಾಷ್ಟ್ರೀಯ ಡೆಂಘೆ ದಿನದ ಅಂಗವಾಗಿ ದಿನೇಶ್ ಗುಂಡೂರಾವ್ ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರಗುಂಡಿ ಬಡಾವಣೆಯಲ್ಲಿ ಮನೆ ಮನೆ ಭೇಟಿ ನೀಡಿ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ನೀರಿನ ಟ್ಯಾಂಕ್, ನೀರು ಸಂಗ್ರಹಿಸುವ ಡ್ರಮ್, ಬಿಂದಿಗೆಗಳನ್ನು ಸಂಪೂರ್ಣ ಮುಚ್ಚಿಡುವಂತೆ ಹಾಗೂ ನಿಯಮಿತವಾಗಿ ಸ್ವಚ್ಛಗೊಳಿಸುವಂತೆ ಸಲಹೆ ನೀಡಿದರು.