ಬೆಂಗಳೂರು: ರಾಜ್ಯದಲ್ಲಿ ಕಳೆದ ತಿಂಗಳಲ್ಲಿ 982 ಡೆಂಘೆ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ ಐದು ಸಾವಿರದ ಗಡಿ (5,093) ದಾಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ವರ್ಷ 1.60 ಲಕ್ಷ ಶಂಕಿತರನ್ನು ಗುರುತಿಸಲಾಗಿದೆ. 70 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಅವುಗಳಲ್ಲಿ ಗ್ರೇಟರ್ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಧಿಕ (2,478), ಕಲಬುರಗಿ (303), ತುಮಕೂರು (178), ದಕ್ಷಿಣ ಕನ್ನಡ (149), ವಿಜಯಪುರ (138), ಬೆಂಗಳೂರು ನಗರ (132), ಉಡುಪಿ (122), ಧಾರವಾಡ (117), ಮಂಡ್ಯ (117), ಚಿತ್ರದುರ್ಗ (116), ಶಿವಮೊಗ್ಗ (111) ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 5,093 ಪ್ರಕರಣಗಳು ವರದಿಯಾಗಿವೆ.
ಕಳೆದ ವರ್ಷ ಬೆಂಗಳೂರಿನಲ್ಲಿ 15,282 ಸೇರಿ ರಾಜ್ಯದಲ್ಲಿ 32 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದವು. ಜ್ವರದ ತೀವ್ರತೆಗೆ ಮೂವರು ಮೃತಪಟ್ಟಿದ್ದರು. ಈ ವರ್ಷ ಈವರೆಗೆ ಮರಣ ಪ್ರಕರಣ ವರದಿಯಾಗಿಲ್ಲ.
ಚಿಕೂನ್‌ಗುನ್ಯಾ: ಈ ವರ್ಷ 853 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. 36 ಸಾವಿರ ಶಂಕಿತರಲ್ಲಿ 17 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. 27 ಜಿಲ್ಲೆಗಳಲ್ಲಿ ಪ್ರಕರಣಗಳು ದೃಢಪಟ್ಟಿವೆ. ಚಿಕೂನ್‌ಗುನ್ಯಾ ಹಾಗೂ ಡೆಂಘೆ ಪ್ರಕರಣಗಳು ನಿಯಂತ್ರಣದಲ್ಲಿವೆ. ಮಳೆಗಾಲ ಮುಗಿಯುವವರೆಗೂ ಸ್ವಚ್ಛತೆಗೆ ಆದ್ಯತೆ ನೀಡಿ, ಸೊಳ್ಳೆ ಕಡಿತಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.