ಜಿಲ್ಲೆ

ಡೆಂಘೆ ಜ್ವರದಲ್ಲಿ ಮಂಡ್ಯಕ್ಕೆ 2ನೇ ಸ್ಥಾನ: ವೇಗವಾಗಿ ಹರಡುತ್ತಿರುವ ಸೋಂಕು

ಕೆ.ಎನ್.ರಾಘವೇಂದ್ರ

ಮಂಡ್ಯ: ಕರೊನಾ ಸೋಂಕಿನ ಬಳಿಕ ಇದೀಗ ಜಿಲ್ಲೆಯಲ್ಲಿ ಡೆಂಘೆ ಜ್ವರದ ಆತಂಕ ಹೆಚ್ಚಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿರುವುದರ ಹೊರತಾಗಿಯೂ ರೋಗ ಹರಡುವ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಜು.12ಕ್ಕೆ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿ ಮಂಡ್ಯ ಜಿಲ್ಲೆ ಇರುವುದು ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಪ್ರಸ್ತುತ 37 ಸಕ್ರಿಯ ಪ್ರಕರಣಗಳಿವೆ. ಅಂತೆಯೇ ಈವರೆಗೆ 362 ಜನರಲ್ಲಿ ಜ್ವರ ಕಾಣಿಸಿಕೊಂಡಿದ್ದು, 1,950 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಇನ್ನು ಜ್ವರ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆದರೆ ಮನೆಗಳಿಗೆ ಭೇಟಿ ಕೊಟ್ಟಾಗ ಆಶಾ ಕಾರ್ಯಕರ್ತೆಯರು ನೀರಿನ ಪರಿಶೀಲನೆ ಮಾಡಲು ಅವಕಾಶ ಕೊಡುತ್ತಿಲ್ಲ. ಜತೆಗೆ ನಿಂದಿಸುವ ಕೆಟ್ಟ ಚಾಳಿಯೂ ನಡೆಯುತ್ತಿದ್ದು, ಜ್ವರದ ನಿಯಂತ್ರಣಕ್ಕೆ ದೊಡ್ಡ ಹಿನ್ನಡೆಯಾಗುತ್ತಿದೆ.

ಉದಾಸೀನ ಮಾಡಬೇಡಿ: ಜಿಲ್ಲೆಯಲ್ಲಿ ಡೆಂಘೆ ಪ್ರಕರಣಗಳು ಉಲ್ಬಣವಾಗುತ್ತಿದ್ದು, ಇವುಗಳ ತಡೆಗೆ ಹಾಸ್ಟೆಲ್, ಶಾಲೆ, ಕಾಲೇಜಿನಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿ ಡಾ.ಕಾಂತರಾಜು ಹೇಳಿದರು.

ನಗರದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶುಕ್ರವಾರ ರಾತ್ರಿ ಆಯೋಜಿಸಿದ್ದ ಡೆಂಘೆ ಮತ್ತು ಚಿಕುನ್‌ಗುನ್ಯಾ ರೋಗಗಳ ನಿಯಂತ್ರಣ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡೆಂಘೆ ಪ್ರಕರಣವನ್ನು ಪ್ರಾರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆದರೆ ಗುಣಮುಖರಾಗುತ್ತಾರೆ. ಆರೋಗ್ಯದ ವಿಷಯದಲ್ಲಿ ಉದಾಸೀನ ಮಾಡಿದಲ್ಲಿ ತೊಂದರೆ ತಪ್ಪಿದ್ದಲ್ಲ. ಆದ್ದರಿಂದ ಡೆಂಘೆ ಲಕ್ಷಣ ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದು ಗುಣಮುಖರಾಗಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆಯು ಇರುತ್ತದೆ. ಇದರ ಸದ್ಭಳಕೆ ಮಾಡಿಕೊಳ್ಳಬೆಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಇದರ ಬಗ್ಗೆ ಮಾಹಿತಿ ಪಡೆದು ನಿಮ್ಮ ಕುಟುಂಬದವರಿಗೂ ಜಾಗೃತಿ ಮೂಡಿಸಬೇಕು. ಶಾಲೆ, ಕಾಲೇಜು, ಹಾಸ್ಟೆಲ್, ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಹಳೆಯ ಟೈಯರ್, ಖಾಲಿ ಬಾಟಲಿ, ತೆಂಗಿನಚಿಪ್ಪುಗಳು ಸೇರಿದಂತೆ ಅನುಪಯುಕ್ತ ವಸ್ತುಗಳ ಜಾಗದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕು. ಇದರಿಂದ ಸೊಳ್ಳೆಯ ಸಂತಾನೋತ್ಪತ್ತಿ ತಡೆಗಟ್ಟಬಹುದು ಎಂದರು.

ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಎಂ.ಸಿ.ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ನೂರಾರು ಜನ ಡೆಂಘೆ ಜ್ವರದಿಂದ ಗುಣಮುಖರಾಗಿದ್ದಾರೆ. ನಮ್ಮಲ್ಲಿ ಯಾವುದೇ ಸಾವು ಸಂಭವಿಸಿರುವುದಿಲ್ಲ. ಪ್ರಸ್ತುತ ಮಕ್ಕಳು, ಗರ್ಭಿಣಿಯರು, ವಯೋವೃದ್ಧರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬೇಗ ರೋಗಕ್ಕೆ ತುತ್ತಾಗುತ್ತಾರೆ. ಈ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಆದರೆ, ಮುಂಜಾಗ್ರತೆ ವಹಿಸಬೇಕು. ಜತೆಗೆ ಎಲ್ಲರ ಸಹಕಾರದಿಂದ ಅತೋಟಿಗೆ ತರಬಹುದು ಎಂದು ಮನವಿ ಮಾಡಿದರು.

ನಗರಸಭಾ ಸದಸ್ಯೆ ಪೂರ್ಣಿಮಾ, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ, ಆಡಳಿತ ವೈದ್ಯಾಧಿಕಾರಿ ಡಾ.ಪೂರ್ಣಿಮಾ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶ್ರೀನಿವಾಸ್, ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಶೇಖರ್, ಹಾಸ್ಟೆಲ್ ವಾರ್ಡನ್ ಬಸವರಾಜು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಡೆಂಘೆ ಸಂಬಂಧ ಜಾಗೃತಿ ಭಿತ್ತಿಪತ್ರ ಪ್ರದರ್ಶಿಸಿದರು.