ಮಂಡ್ಯ: ಸೊಳ್ಳೆಗಳ ಮೂಲಕ ಡೆಂಘೆ ಜ್ವರ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಮುಂಗಾರು ಮಳೆ ಪ್ರಾರಂಭವಾಗಿದ್ದು, ಹೆಚ್ಚಾಗಿ ಸೊಳ್ಳೆಗಳು ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮನೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಸಲಹೆ ನೀಡಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಡೆಂಘೆ ಜಾಗೃತಿ ಜಾಥಾ ಮತ್ತು ಮಾನವ ಸರಪಳಿ ಉದ್ಘಾಟಿಸಿ ಮಾತನಾಡಿದ ಅವರು, ಮೇ.16 ರಂದು ರಾಷ್ಟ್ರೀಯ ಡೆಂಘೆ ದಿನವನ್ನು ಆಚರಣೆ ಮಾಡಲಾಗುತ್ತದೆ. ಡೆಂಘೆ ನಿಯಂತ್ರಣದ ಜಾಗೃತಿ ಜಾಥಾ ಕಾರ್ಯಕ್ರಮ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಹ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕರು ಡೆಂಘೆ ಜ್ವರದ ಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸಿ ರೋಗ ಹರಡದಂತೆ ನೋಡಿಕೊಳ್ಳಬೇಕು. ರೋಗ ಬರುವುದಕ್ಕೂ ಮುಂಚಿತವಾಗಿ ನಾವುಗಳು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡರೆ ರೋಗ ಹರಡುವುದಿಲ್ಲ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಈ ಬಾರಿ ಸಮುದಾಯದೊಂದಿಗೆ ಸೇರಿ ಡೆಂಘೆ ನಿಯಂತ್ರಿಸೋಣ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಡೆಂಘೆ ಜ್ವರವು ಸೊಳ್ಳೆಯಿಂದ ಹರಡಲಿದೆ. ಒಬ್ಬರಿಂದ ಮತ್ತೊಬ್ಬರಿಗೆ ಬರುವಂತಹ ಕಾಯಿಲೆಯಾಗಿದ್ದು, ಆದ್ದರಿಂದ ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ತೀವ್ರ ಜ್ವರ, ಕಣ್ಣು ಹಿಂಭಾಗ ನೋವು, ತೀರ ಮೈ-ಕೈ ನೋವು ಡೆಂಘೆ ರೋಗದ ಲಕ್ಷಣಗಳು. ಈ ರೋಗ ಬರದಂತೆ ತಡೆಯುವುದೇ ಮೂಲ ಉದ್ದೇಶವಾಗಿರುತ್ತದೆ. ಅದರಂತೆ ಸೊಳ್ಳೆಗಳು ಉತ್ಪತ್ತಿ ಆಗದಂತೆ ನೋಡಿಕೊಳ್ಳುವುದು. ಮನೆ ಆವರಣದಲ್ಲಿ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಈ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಹೇಳಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಾಂತರಾಜ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ಸೋಮಶೇಖರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ ಇತರರಿದ್ದರು.
ಇದೇ ವೇಳೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಡೆಂೆ ನಿಯಂತ್ರಣದ ಘೋಷವಾಕ್ಯ ಕೂಗುತ್ತಾ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಅರಿವು ಮೂಡಿಸಿದರು.