ಜಿಲ್ಲೆ

ಡೆಂಘೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,402ಕ್ಕೆ ಏರಿಕೆ

ಪಂಕಜ ಕೆ.ಎಂ.

ಬೆಂಗಳೂರು: ರಾಜ್ಯದಲ್ಲಿ ಡೆಂಘೆ ಏರುಮುಖವಾಗಿದ್ದು, ಸೋಮವಾರ 409 ಹೊಸ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,402ಕ್ಕೆ ಏರಿಕೆಯಾಗಿದೆ. 13 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ 2,511 ಶಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಬೆಂಗಳೂರಿನಲ್ಲಿ 181, ತುಮಕೂರು ಮತ್ತು ಹಾಸನ ತಲಾ 55, ಚಿಕ್ಕಬಳ್ಳಾಪುರ 25, ಮಂಡ್ಯ 23 ಸೇರಿ 409 ಮಂದಿ ಡೆಂಘೆ ಪೀಡಿತರಾಗಿದ್ದಾರೆ. 2,879 ಮಂದಿ ಮನೆ ಆರೈಕೆಯಲ್ಲಿದ್ದಾರೆ.

ರಾಜ್ಯದಲ್ಲಿ ಈವರೆಗೂ ಒಂದು ವರ್ಷದೊಳಗಿನ 247 ಮಕ್ಕಳು, 1 ರಿಂದ 18 ವರ್ಷದ 5,132 ಮಂದಿ ಹದಿಹರೆಯದವರು ಹಾಗೂ 18 ಮೇಲ್ಪಟ್ಟ 9,253 ಮಂದಿ ಸೇರಿ 14,632 ಮಂದಿ ಡೆಂಘೆ ಜ್ವರದಿಂದ ಬಳಲಿದ್ದಾರೆ. ಇದರುವರೆಗೂ ಬೆಂಗಳೂರಿನಲ್ಲಿ ಮೂವರು, ಶಿವಮೊಗ್ಗ ಮತ್ತು ಹಾಸನದಲ್ಲಿ ತಲಾ ಇಬ್ಬರು ಹಾಗೂ ಧಾರವಾಡ, ಹಾವೇರಿ ಮತ್ತು ಮೈಸೂರಿನಲ್ಲಿ ತಲಾ ಒಬ್ಬರಂತೆ ಹತ್ತು ಮಂದಿ ಸಾವನ್ನಪ್ಪಿದ್ದಾರೆ.