ವಿಜಯವಾಣಿ ಸುದ್ದಿಜಾಲ ನಂದಗುಡಿ
ಸಾರ್ವಜನಿಕರು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದು. ಕಳೆ ಸಸ್ಯಗಳ ನಿರ್ಮೂಲನೆ ಮಾಡುವಂತಹ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ಗ್ರಾಪಂ ಅಧ್ಯಕ್ಷೆ ಮುನಿವೆಂಕಟಮ್ಮಬಚ್ಚಪ್ಪ ಹೇಳಿದರು.
ನಂದಗುಡಿ ಗ್ರಾಪಂ ವ್ಯಾಪ್ತಿಯ ಕೊಂಡ್ರಹಳ್ಳಿ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಗ್ರಾಪಂ ಸಹಯೋಗದಲ್ಲಿ ಸೊಳ್ಳೆಗಳ ಹಾವಳಿ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಫಾಗಿಂಗ್ ಸಿಂಪಡಣೆ ಕಾರ್ಯದ ಕುರಿತು ಮಾತನಾಡಿದರು.ಮನೆಯ ಸುತ್ತಮುತ್ತಲೂ ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಹರಡುವ ಡೆಂಘೆ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ರೋಗಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಬೇಕಾಗಿದ್ದು, ಹಗಲಿನಲ್ಲಿ ಅತೀಹೆಚ್ಚು ಜಾಗರೂಕವಾಗಿ ಇರಬೇಕು ಎಂದರು.
ಮಳೆಗಾಲದಲ್ಲಿ ಮೋಡ ಕವಿದ ವಾತಾವರಣವಿದ್ದು, ತೆಂಗಿನಚಿಪ್ಪು, ಟಯರ್, ಖಾಲಿ ಡಬ್ಬ, ಕ್ಯಾನ್, ಅಕ್ವೇರಿಯಂ, ಏರ್ ಕಂಡಿಷನರ್, ಏರ್ ಕೂಲರ್ ಇತ್ಯಾದಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ತಮ್ಮ ಹಾಗೂ ನೆರೆಹೊರೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದರು.
ಗ್ರಾಪಂನ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ಸಾಂಕ್ರಾಮಿಕ ರೋಗಗಳ ಭೀತಿಯ ಹಿನ್ನೆಲೆಯಲ್ಲಿ ಸೊಳ್ಳೆಗಳ ಹಾವಳಿ ನಿಯಂತ್ರಿಸಲು ಗ್ರಾಮ ಪಂಚಾಯಿತಿ ವತಿಯಿಂದ ಫಾಗಿಂಗ್ ಸಿಂಪಡಣೆ ಕೈಗೊಂಡಿದೆ. ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ಪ್ರತಿಯೊಂದು ಮನೆಗೆ ಭೇಟಿ ನೀಡಿ ಮನೆಯ ಒಳಗೆ ಮತ್ತು ಹೊರಗೆ ಫಾಗಿಂಗ್ ಔಷಧ ಸಿಂಪಡಣೆ ನಿರಂತರವಾಗಿ ನಡೆಯುತ್ತದೆ ಎಂದು ತಿಳಿಸಿದರು.
ಗ್ರಾಪಂನ ಕಾರ್ಯದರ್ಶಿ ವೆಂಕಟೇಶ್, ಕರ ವಸೂಲಿಗಾರ ಮನೋಜ್, ಗ್ರಾಪಂನ ಸಿಬ್ಬಂದಿಯಾದ ವೆಂಕಟೇಶ್, ರಾಜೇಶ್ ಇದ್ದರು.