ಹೊಸಕೋಟೆಯಲ್ಲಿ ಈಡಿಸ್ ಲಾರ್ವಾ ಉತ್ಪತ್ತಿ ತಾಣ ನಾಶ ಚಟುವಟಿಕೆಗೆ ಶಾಸಕ ಶರತ್‌ಬಚ್ಚೇಗೌಡ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಸಿಇಒ ಡಾ.ಕೆ.ಎನ್.ಅನುರಾಧಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್‌ಕುಮಾರ್ ಇದ್ದರು. 
ಜಿಲ್ಲೆ

ಜಿಲ್ಲೆಯಲ್ಲಿ ಕನಿಷ್ಟ ಡೆಂಘೆ ಪ್ರಕರಣ

ಶಿವರಾಜ.ಎಂ

ಜನವರಿಯಿಂದ ಇದುವರೆಗೆ 15 ಪ್ರಕರಣ ದೃಢ

ಶಂಕಿತ ಪ್ರಕರಣ 467


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯದಲ್ಲಿ ಡೆಂಘೆ ದಾಂಗುಡಿ ಇಟ್ಟಿದ್ದು ಸಾವಿನ ಪ್ರಮಾಣವೂ ಆತಂಕ ಮೂಡಿಸಿರುವ ನಡುವೆ ಗ್ರಾಮಾಂತರ ಜಿಲ್ಲೆಯಲ್ಲಿ ಡೆಂಘೆ ತಪಾಸಣೆ ಚುರುಕುಗೊಳಿಸಲಾಗಿದೆ. ಪ್ರಸ್ತುತ 15 ಡೆಂಘೆ ಪ್ರಕರಣ ಧೃಡಪಟ್ಟಿದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಕನಿಷ್ಟ ಡೆಂಘೆ ಪ್ರಕರಣ ಪತ್ತೆಯಾಗಿದ್ದು ಸದ್ಯಕ್ಕೆ ಆತಂಕಪಡುವಂತಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಪ್ರಸ್ತುತ ಮಳೆಗಾಲವಾಗಿದ್ದು ರಾಜ್ಯದಲ್ಲಿ ಡೆಂಗಿ ಜ್ವರ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಯಿಂದಾಗಿ ರಾಜ್ಯದ್ಯಂತ ಜೂ.28ರಂದು ಈಡಿಸ್ ಲಾರ್ವಾ ಉತ್ಪತ್ತಿ ತಾಣ ನಾಶ ಚಟುವಟಿಕೆಗೆ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದಲ್ಲಿ ಹೊಸಕೋಟೆಯಲ್ಲಿ ಅಧಿಕೃತ ಚಾಲನೆ ನೀಡಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಡೆಂಘೆ ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಂಡಿದೆ.
325 ಪರೀಕ್ಷೆ: ಜನವರಿಯಿಂದ ಇದುವರೆ ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ದೇವನಹಳ್ಳಿ ವ್ಯಾಪ್ತಿಯಲ್ಲಿ 467 ಶಂಕಿತ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ 325 ಮಂದಿ ತಪಾಸಣೆ ನಡೆಸಿದ್ದು, 15 ಮಂದಿಯಲ್ಲಿ ಡೆಂಘೆ ದೃಢಪಟ್ಟಿದೆ. ಅದೃಷ್ಟವಶಾತ್ ಇವರೆಲ್ಲರಿಗೂ ಸಕಾಲದಲ್ಲಿ ಚಿಕಿತ್ಸೆ ದೊರಕಿಸಿಕೊಟ್ಟಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಹಾಸಿಗೆ ಮೀಸಲಿಗೆ ಸಿದ್ದತೆ: ಡೆಂಘೆ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಹತೋಟಿಗೆ ತರಲು ಜಿಲ್ಲೆಯ ನಾಲ್ಕೂ ತಾಲೂಕಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡಲು ಜಿಲ್ಲಾ ಆರೋಗ್ಯ ಇಲಾಖೆ ಸಿದ್ದತೆ ನಡೆಸಿದೆ. ಶಂಕಿತ ಡೆಂಘೆ ಪ್ರಕರಣಗಳ ತಪಾಸಣೆಯಲ್ಲಿ ಸೋಂಕು ದೃಢಪಟ್ಟಲ್ಲಿ ತಕ್ಷಣ ಸೂಕ್ತ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಗ್ರಾಮಾಂತರ ಜಿಲ್ಲೆಯ ನೆರೆ ಜಿಲ್ಲೆಗಳಾದ ರಾಮನಗರದಲ್ಲಿ 44, ಚಿಕ್ಕಬಳ್ಳಾಪುರದಲ್ಲಿ 71 ಕೋಲಾರ ಜಿಲ್ಲೆಯಲ್ಲಿ 46 ತುಮಕೂರು ವ್ಯಾಪ್ತಿಯಲ್ಲಿ 169 ಪ್ರಕರಣ ಪತ್ತೆಯಾಗಿದೆ. ಗ್ರಾಮಾಂತರ ಜಿಲ್ಲೆಯ ಗಡಿ ಹಂಚಿಕೊಂಡಿರುವ ಬೆಂಗಳೂರಿನಲ್ಲಿ ಪ್ರಕರಣ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಕ್ತ ಮಾದರಿ ತಪಾಸಣೆ ತೀವ್ರಗೊಳಿಸಲಾಗಿದೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಗ್ರಾಮಾಂತರದಲ್ಲಿ ಡೆಂಘೆ ಪ್ರಕರಣ ತೀವ್ರವಾಗಿಲ್ಲದಿರುವುದು ಸಮಾಧಾನ ತಂದಿದೆಯಾದರೂ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಆಸ್ಪತ್ರೆಗಳಲ್ಲಿ ಸರದಿ ಸಾಲು: ಸಾಮಾನ್ಯವಾಗಿ ಮಳೆಗಾಲದಲ್ಲಿ ಶೀತ, ನೆಗಡಿ, ಜ್ವರದಂತ ಸಾಮಾನ್ಯ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಆದರೆ ಈ ಬಾರಿ ಬಿರುಬಿಸಿಲು ತೀವ್ರ ಮಳೆಯಿಂದಾಗಿ ಹವಾಮಾನ ವೈಪರಿತ್ಯದ ಕಾರಣ ಜ್ವರದಂಥ ಪ್ರಕರಣಗಳು ಹೆಚ್ಚಿವೆ. ಡೆಂಘೆ ಭೀತಿಯಿಂದ ಸಾಮಾನ್ಯ ಜ್ವರ ಬಂದರೂ ಜನರು ಆತಂಕಗೊಳ್ಳುತ್ತಿದ್ದು ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಖಾಸಗಿ ಕ್ಲಿನಿಕ್‌ಗಳ ಬಳಿ ಜನರ ಸಾಲು ಕಂಡುಬರುತ್ತಿದೆ. ಸಾಮಾನ್ಯವಾಗಿ ಡೆಂಘೆ ಪ್ರಕರಣಗಳಲ್ಲಿ ತೀವ್ರತರನಾದ ತಲೆನೋವು ಕಾಣಿಸಿಕೊಳ್ಳುವ ಜತೆಗೆ ಜ್ವರದ ತಾಪದ ಪ್ರಮಾಣ ಹೆಚ್ಚಿರುತ್ತದೆ. ಇದರೊಂದಿಗೆ ಚಿಕೂನ್‌ಗುನ್ಯಾ ಭೀತಿ ಕಾರಣದಿಂದಲೂ ಜನ ಆತಂಕಗೊಂಡಿದ್ದು ಜನರಲ್ಲಿ ಜಾಗೃತಿ ಮೂಡಿಸಲು ಅರೋಗ್ಯ ಇಲಾಖೆ ಹರಸಾಹಸ ನಡೆಸುತ್ತಿದೆ.
ಸಾರ್ವಜನಿಕರು ಕೈಜೋಡಿಸಬೇಕು: ಜುಲೈ ತಿಂಗಳಿನಲ್ಲಿ ಆಚರಿಸಲ್ಪಡುವ ಡೆಂಘೆ ವಿರೋಧ ಮಾಸಾಚರಣೆಯ ಧ್ಯೇಯವಾಕ್ಯವು ’ಸಮುದಾಯದೊಂದಿಗೆ ಸೇರಿ ಡೆಂಗಿ ಜ್ವರವನ್ನು ನಿಯಂತ್ರಿಸೋಣ’ ಎಂದಾಗಿದೆ. ಈ ಜ್ವರ ನಿಯಂತ್ರಣ ಕ್ರಮಗಳ ಅನುಷ್ಠಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಡೆಂಘೆ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ.

ಸಾರ್ವಜನಿಕರು ತಮ್ಮ ಮನೆಗಳಲ್ಲಿ, ಸಿಬ್ಬಂದಿ ವರ್ಗದವರು ಕಚೇರಿಗಳಲ್ಲಿ, ಶಾಲಾ ಕಾಲೇಜುಗಳು ಇತ್ಯಾದಿ ಕಡೆಗಳಲ್ಲಿ ನೀರು ತುಂಬುವ ಹೆಚ್ಚು ದಿನಗಳವರೆಗೆ ಶೇಖರಣೆಯಾಗುವ ಪರಿಕರಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಮಳೆ ನೀರು ಸಂಗ್ರಹವಾಗುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡುವುದರ ಮೂಲಕ ಡೆಂಘೆ ಜ್ವರ ಹರಡುವ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸುವಲ್ಲಿ ಎಲ್ಲರ ಸಹಕಾರ ಅಗತ್ಯ.

ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ

ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಈಜಿಪ್ಟೆ ಸೊಳ್ಳೆಯಿಂದಾಗಿ ಡೆಂಘೆ ಸೋಂಕು ಹರಡುತ್ತದೆ, ನಿಂತ ನೀರಿನಲ್ಲಿ ಇದರ ಸಂತಾನೋತ್ಪತ್ತಿ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಮನೆ ಹಾಗೂ ಮನೆಯ ಸುತ್ತಮುತ್ತಲ ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಪರಿಣಾಮಕಾರಿಯಾಗಿ ಡೆಂಘೆ ನಿಯಂತ್ರಣ ಮಾಡಬಹುದು. ಆರೋಗ್ಯ ಇಲಾಖೆ ತಪಾಸಣೆ ಚುರುಕುಗೊಳಿಸಿದ್ದು ಡೆಂಘೆ ಹತೋಟಿಗೆ ಸಮರೋಪಾದಿಯಲ್ಲಿ ಕ್ರಮಕೈಗೊಂಡಿದೆ.
ಡಾ.ಸುನೀಲ್‌ಕುಮಾರ್, ಜಿಲ್ಲಾ ಅರೋಗ್ಯಾಧಿಕಾರಿ