ಜಿಲ್ಲೆ

ತುಮಕೂರು-ಯಶವಂತಪುರ ನಡುವೆ ಡೆಮು ರೈಲು ಸಂಚಾರ ಆರಂಭ ;ವಾರದಲ್ಲಿ 6 ದಿನ ಸೇವೆ

Tumakuru

ತುಮಕೂರು: ತುಮಕೂರು-ಯಶವಂತಪುರ ನಡುವೆ ಡೆಮು ರೈಲು ಸಂಚಾರ ಸೋಮವಾರ ಆರಂಭಗೊಂಡಿದೆ. ವಾರದಲ್ಲಿ 6 ದಿನ ಬೆಳಗ್ಗೆ 7.30ಕ್ಕೆ ತುಮಕೂರಿನಿಂದ ಹೊರಟು 9 ಗಂಟೆಗೆ ಯಶವಂತಪುರ ತಲುಪಲಿದೆ. 8 ಬೋಗಿಗಳ ಡೆಮು ರೈಲು ಸಂಜೆ 6.35ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 8ಕ್ಕೆ ತುಮಕೂರು ತಲುಪಲಿದೆ. ಪ್ರಾಯೋಗಿಕವಾಗಿ ಸಂಚಾರ ಆರಂಭಿಸಲಾಗಿದ್ದು, ಪ್ರತಿನಿತ್ಯ ಬೆಂಗಳೂರಿಗೆ ತೆರಳುವವರು ಸಂತಸದಿಂದಲೇ ಪ್ರಯಾಣ ಬೆಳೆಸಿದರು.

ಮಾಸ್ಕ್ ವಿತರಿಸಿ ಚಾಲನೆ: ರೈಲು ಸಂಚಾರಕ್ಕೆ ಸಂಸದ ಬಸವರಾಜು ಪ್ರಯಾಣಿಕರಿಗೆ ಮಾಸ್ಕ್ ವಿತರಿಸುವ ಮೂಲಕ ಚಾಲನೆ ನೀಡಿದರು. ಸದ್ಯಕ್ಕೆ ಯಶವಂತಪುರದ ಬದಲು ಕೆಂಪೇಗೌಡ ರೈಲು ನಿಲ್ದಾಣದವರೆಗೂ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು. ಪ್ಯಾಸೆಂಜರ್ ರೈಲು ಸಂಚಾರ ಇಲ್ಲದೆ ತುಮಕೂರಿನಿಂದ ಬೆಂಗಳೂರಿಗೆ ತೆರಳುವವರಿಗೆ ತುಂಬಾ ತೊಂದರೆಯಾಗಿತ್ತು.

ರೈಲಿನಲ್ಲಿ ಪ್ರಯಾಣಿಸುವವರು ಪರಸ್ಪರ ಅಂತರ ಕಾಪಾಡುವುದರೊಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಪಾಲಿಕೆ ಸದಸ್ಯೆ ವಿ.ಎಸ್.ಗಿರಿಜಾ ತಿಳಿಸಿದರು. ರೈಲ್ವೆ ಇಲಾಖೆ ಬೆಂಗಳೂರು ವಿಭಾಗದ ಎಡಿಆರ್‌ಎಲ್ ಲಕ್ಷ್ಮಣ್‌ಸಿಂಗ್, ಎಸಿಎಂ ಇಕ್ಬಾಲ್ ಅಹಮದ್, ಸ್ಟೇಷನ್ ಮಾಸ್ಟರ್ ರಮೇಶ್‌ಬಾಬು ಇದ್ದರು.

ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್, ರಾಣಿಚೆನ್ನಮ್ಮ, ಧಾರವಾಡ ಇಂಟರ್‌ಸಿಟಿ ಹಾಗೂ ರಾತ್ರಿ ಹೊಸಪೇಟೆ ಎಕ್ಸ್ ಪ್ರೆಸ್ ರೈಲುಗಳು ಸಂಚಾರ ಆರಂಭಿಸಿವೆ. ಈ ರೈಲುಗಳಿಗೆ ಆನ್‌ಲೈನ್‌ನಲ್ಲೇ ಮುಂಗಡ ಟಿಕೆಟ್ ಕಾಯ್ದಿರಿಸಬೇಕು. ಡೆಮು ರೈಲಿನಲ್ಲಿ ಸಂಚರಿಸಲು ಟಿಕೆಟ್ ವಿತರಿಸಲಾಗುವುದು. ಉಳಿದ ಇನ್ಯಾವುದೇ ರೈಲುಗಳಿಗೆ ಕೌಂಟರ್‌ನಲ್ಲಿ ಟಿಕೆಟ್ ನೀಡಲಾಗುವುದಿಲ್ಲ. ಆನ್‌ಲೈನ್‌ನಲ್ಲೇ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು. ಧನಂಜಯ ರೈಲ್ವೆ ಇಲಾಖೆ ವಾಣಿಜ್ಯ ನಿರೀಕ್ಷಕ