ಸಾಗರದ ಖಾಸಗಿ ಬಸ್ ನಿಲ್ದಾಣದ ಎದುರು ಮದ್ಯದಂಗಡಿ ತೆರೆಯದಂತೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಇಂದಿರಾ, ಶೋಭಾ, ಶ್ವೇತಾ, ಸುಮಿತ್ರಾ ಇತರರಿದ್ದರು. 
ಜಿಲ್ಲೆ

ಮದ್ಯದಂಗಡಿ ವಿರುದ್ಧ ನಾರಿಶಕ್ತಿ ಪ್ರದರ್ಶನ

ಸಾಗರ: ನಗರದ ಖಾಸಗಿ ಬಸ್ ನಿಲ್ದಾಣದ ಎದುರು ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಮಂಗಳವಾರ ಸ್ಥಳೀಯರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.

ಮದ್ಯದಂಗಡಿ ತೆರೆಯಲು ನಮ್ಮ ವಿರೋಧವಿದೆ. ಈ ಭಾಗದಲ್ಲಿ ಪೌರ ಕಾರ್ಮಿಕರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿ ಮದ್ಯದಂಗಡಿ ತೆರೆಯುವುದರಿಂದ ದುಡಿದ ಹಣವನ್ನು ಮದ್ಯ ಸೇವನೆಗೆ ವ್ಯಯಿಸುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನಲ್ಲಿ ಮದ್ಯ ಸೇವನೆ ಮಾಡಿ ಆರೋಗ್ಯ ಕೆಡಿಸಿಕೊಂಡು ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬಸ್ ನಿಲ್ದಾಣದ ಎದುರು ಮದ್ಯದಂಗಡಿ ತೆರೆಯುವುದರಿಂದ ಕುಡಿದ ಅಮಲಿನಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಮದ್ಯದಂಗಡಿಯನ್ನು ಇಲ್ಲಿಂದ ಬೇರೆ ಕಡೆ ವರ್ಗಾಯಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಅಕ್ಕಮ್ಮ, ರೇಷ್ಮಾ, ಸುಪ್ರಿತಾ, ಸಂಧ್ಯಾ, ಕೀರ್ತಿ, ಗೀತಾ, ಇಂದಿರಾ, ಶೋಭಾ, ಶ್ವೇತಾ, ಸುಮಿತ್ರಾ ಇತರರಿದ್ದರು.