ಮಂಡ್ಯ: ಆಧುನಿಕತೆಯ ಭರಾಟೆ ನಡುವೆ ನಮ್ಮ ಸಂಸ್ಕೃತಿ ಹಾಗೂ ಕಲೆಯನ್ನು ಮರೆಯುತ್ತಿದ್ದೇವೆ. ದೇಸಿ ಕಲೆಗಳು ಜೀವಂತವಾಗಿರಬೇಕೆಂದರೆ ಮುಂದಿನ ಪೀಳಿಗೆ ಅದನ್ನು ರವಾನಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.
ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್, ಜಿಲ್ಲಾ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸಂಘದ ಸಹಯೋಗದೊಂದಿಗೆ ಏರ್ಪಡಿಸಿದ್ದ ಮೂಡಲಪಾಯ ಯಕ್ಷಗಾನ ಪ್ರಸಂಗಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಕ್ರಿಯಾಶೀಲ ವ್ಯಕ್ತಿತ್ವದ ಜಯಪ್ರಕಾಶಗೌಡ ಅವರು ಮುಂದಾಳತ್ವವನ್ನು ತೆಗೆದುಕೊಂಡು ವಿದ್ಯಾರ್ಥಿಗಳ ಮೂಲಕ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಾಟಕ ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ.ಆದರೆ ನೋಡುವುದರ ಮೂಲಕ ಸುಲಭವಾಗಿ ಗ್ರಹಿಸಬಹುದಲ್ಲದೇ, ಮನಸ್ಸಿಗೆ ಶಾಂತಿ ನೆಮ್ಮದಿಯ ಜತೆಗೆ ಒಳ್ಳೆಯ ಅನುಭವ ದೊರಕುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿ, ಸ್ಮರಣ ಪತ್ರಿಕೆ ಬಿಡುಗಡೆ ಮಾಡಿದರು.
ಮೂಡಲಪಾಯ ಯಕ್ಷಗಾನ ಪರಿಷತ್ ಗೌರವಾಧ್ಯಕ್ಷ ಜಯರಾಮ್ ರಾಯಪುರ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಜಿ.ಪಿ.ಭಕ್ತವತ್ಸಲ, ಆಯುಕ್ತ ಎಚ್.ಅನಿಲ್ ಕುಮಾರ್, ಕೆ.ಸಿ.ನಾಗಮ್ಮ, ಪರಿಷತ್ ಕಾರ್ಯದರ್ಶಿ ಶಶಿಧರ ಭಾರಿಘಾಟ್, ಕರ್ನಾಟಕ ಸಂಘದ ಎಚ್.ಡಿ.ಸೋಮಶೇಖರ್ ಮುಂತಾದವರಿದ್ದರು.
ಇದೇ ವೇಳೆ ಸೂನಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು 'ಜಟಾಯು ಮೋಕ್ಷ' ಮತ್ತು ಪೊಲೀಸ್ ಕಾಲನಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳು 'ತ್ರಿಪುರ ಸಂಹಾರ' ಪ್ರಸಂಗಗಳನ್ನು ಪ್ರಸ್ತುತಪಡಿಸಿದರು.