ಜಿಲ್ಲೆ

ದೈವ ಆರಾಧನೆ ಪ್ರದರ್ಶನ ಖಂಡಿಸಿ ಪ್ರತಿಭಟನೆ

ಆದರ್ಶ್. ಎಂ.ಕೆ.

ಮಡಿಕೇರಿ: ದೈವ ಆರಾಧನೆಯನ್ನು ಶಾಲೆಗಳ ರಂಗೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಿ ಸುತ್ತೋಲೆ ಹೊರಡಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ದೈವ ಆರಾಧಕರು ಮತ್ತು ದೈವ ನರ್ತಕರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ದೈವ ಆರಾಧಕರು ಮತ್ತು ದೈವ ನರ್ತಕರು ಸಂಘದ ಸ್ಥಾಪಕ ಅಧ್ಯಕ್ಷ ಪಿ.ಎಂ.ರವಿ, ದೈವ ಆರಾಧನೆಯು ಕರಾವಳಿ ಸೇರಿದಂತೆ ಕೊಡಗು ಜಿಲ್ಲೆಯಲ್ಲು ಬಹುಮುಖ್ಯ ನಂಬಿಕೆ ಮತ್ತು ಆರಾಧನೆ ಪದ್ದತಿಯಾಗಿದೆ. ಇದು ಹಿರಿಯರು ಉಳಿಸಿಕೊಂಡು ಬಂದಿರುವ ಮೂಲ ನಂಬಿಕೆ ಮತ್ತು ಮೂಲ ಕಟ್ಟು ಕಟ್ಟಳೆಯಾಗಿದೆ. ದೈವ ಆರಾಧನೆಗೆ ಸಾವಿರಾರು ವರ್ಷದ ಇತಿಹಾಸವಿದೆ. ಆದರೆ, ದೈವ ಆರಾಧನೆಯನ್ನು ಶಾಲೆಗಳ ರಂಗೋತ್ಸವದ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಿರುವ ಸುತ್ತೊಲೆಯಿಂದ ದೈವಾರಾಧನೆ ಮಾಡುವ ಕ್ಷೇತ್ರದ ಜನರಿಗೆ ನೋವುಂಟಾಗಿದ್ದು, ದೈವ ನರ್ತನ ಸೇವೆ ಮಾಡುವ ಕೆಲವೇ ಸೀಮಿತ ವರ್ಗದ ಸಮುದಾಯಕ್ಕೆ ಅವಮಾನ ಮಾಡಿದಂತಾಗಿದೆ ಎಂದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಸದಾಶಿವ ರೈ, ಸಂಘಟನಾ ಕಾರ್ಯದರ್ಶಿ ರಮೇಶ್, ಉಪಾಧ್ಯಕ್ಷ ರಾಜೇಶ್ ಪೂಜಾರಿ, ಖಜಾಂಜಿ ಜನಾರ್ದನ ಪೂಜಾರಿ, ಸಂಘದ ಸಲಹೆಗಾರ ಕೆ.ಕೆ.ದೇವಪ್ಪ, ಸುಳ್ಯದ ದೈವ ನರ್ತಕ ಜಯರಾಮ್, ಸುಬ್ರಹ್ಮಣ್ಯದ ದೈವ ನರ್ತಕ ಧರ್ಮ, ಸಂಘದ ಸದಸ್ಯರುಗಳಾದ ಪವನ್ ಮೊಗೇರ, ದಿನೇಶ್, ಅಣ್ಣು ಪೂಜಾರಿ, ಜನಾರ್ದನ, ರಾಮಕೃಷ್ಣ, ಸುರೇಶ್ ಕುಲಾಲ್, ಹರೀಶ್ ಆಚಾರ್ಯ, ಮಂಜುನಾಥ್ ಸೇರಿದಂತೆ ಹಲವು ದೈವಆರಾಧಕರ ಸಂಘದ ಪದಾಧಿಕಾರಿಗಳು ಹಾಗೂ ಸುಳ್ಯ ಮತ್ತು ಸುಬ್ರಮಣ್ಯ ಭಾಗದ ದೈವ ನರ್ತಕರುಗಳು ಪಾಲ್ಗೊಂಡಿದ್ದರು.