ಜಿಲ್ಲೆ

ಅಕ್ರಮ ಕಟ್ಟಡಗಳ ನೆಲಸಮ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ : ಪ್ರತಿಷ್ಠಿತ ಕೈಗಾರಿಕಾ ಪ್ರದೇಶದಲ್ಲಿ ಬಲಾಢ್ಯರು, ಭೂಗಳ್ಳರು ರಾಜಕಾಲುವೆಯನ್ನೇ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿ ಬಾಡಿಗೆಗೆ ನೀಡಿದ್ದವರಿಗೆ ಜಿಲ್ಲಾಡಳಿತ ಬಿಸಿ ಮುಟ್ಟಿಸಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜೆಸಿಬಿಗಳ ಮೂಲಕ ಕಟ್ಟಡಗಳ ನೆಲಸಮಗೊಳಿಸಿ ಒತ್ತುವರಿ ತೆರವಿಗೆ ಚಾಲನೆ ದೊರಕಿಸಿದೆ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಒತ್ತುವರಿಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಎರಡು ಎಕರೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಗಿದೆ. ಕೆಲ ಬಲಾಢ್ಯರು, ಭೂಗಳ್ಳರು ಬೊಮ್ಮಸಂದ್ರದಲ್ಲಿನ ಸರ್ವೇ ನಂಬರ್​ 9,10,12,25,28 ರಲ್ಲಿನ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆಗಳು, ಶೆಡ್​, ಪಾರ್ಕಿಂಗ್​, ರಸ್ತೆ ಮತ್ತು ವೇರ್​ ಹೌಸ್​ಗಳಿಗೆ ಬಳಕೆ ಮಾಡಿಕೊಂಡಿದ್ದರು. ಈ ಬಗ್ಗೆ ಕಳೆದ ಕೆಲ ತಿಂಗಳ ಹಿಂದೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.

ತೆರವು ಖಚಿತ : ಜಿಲ್ಲಾಧಿಕಾರಿ ಜಗದೀಶ್​ ಮಾತನಾಡಿ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಹೀಗಾಗಿ ರಾಜಕಾಲುವೆಯನ್ನೇ ಮುಚ್ಚಿದ ಭೂಗಳ್ಳರು ಕಳೆದ ಹದಿನೈದು ವರ್ಷಗಳಿಂದ ಅಲ್ಲಿ ಸುಮಾರು ಮೂವತ್ತಕ್ಕೂ ಅಧಿಕ ಮನೆಗಳನ್ನ ಕಟ್ಟಿ ಬಾಡಿಗೆಗೆ ಕೊಟ್ಟಿದ್ದರು. ಪ್ರತಿ ತಿಂಗಳು ಲಕ್ಷ ಲಕ್ಷ ಬಾಡಿಗೆ ಕೂಡ ಪಡೆಯುತ್ತಿದ್ದರು. ಸರ್ಕಾರದ ಭೂಮಿ ಒತ್ತುವರಿ ಮಾಡಿದರೆ ಒಂದಲ್ಲ ಒಂದು ದಿನ ತೆರವು ಮಾಡುವು ಖಚಿತ ಎಂದರು.

ನಮಗೆ ಒತ್ತುವರಿ ಜಾಗ ಎಂಬುದು ಗೊತ್ತಿಲ್ಲ, ತೆರವು ಮಾಡಲಿ. ಜತೆಗೆ ಇಲ್ಲಿ ಇನ್ನೂ ಸಾಕಷ್ಟು ಒತ್ತುವರಿಯಾಗಿದ್ದು, ಎಲ್ಲವನ್ನು ಅಧಿಕಾರಿಗಳು ತೆರವು ಮಾಡಲಿ ಎಂದಿದ್ದಾರೆ. | ಅಮರಾವತಿ ಒತ್ತುವರಿದಾರರು