ರಾಯಚೂರು: ಜನಪದ ಸಾಮಾನ್ಯ ಮನಸ್ಸುಗಳ ಸಂಸ್ಕೃತಿಯಾಗಿದ್ದು, ಸಂಸ್ಕೃತಿಯ ಒಳ ಸೂಕ್ಷ್ಮಗಳು ನಮ್ಮನ್ನು ಸದಾ ಎಚ್ಚರಿಸುತ್ತವೆ. ಆದರೆ ಆಧುನಿಕತೆಯ ಅಬ್ಬರದಲ್ಲಿ ಜನಪದ ಕಲೆಗಳು ಅಲಕ್ಷೃಕ್ಕೆ ಗುರಿಯಾಗಿದ್ದು, ಅವುಗಳನ್ನು ಕಾಪಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಸಾಹಿತಿ ಡಾ.ಸರ್ವಮಂಗಳ ಸಕ್ರಿ ಹೇಳಿದರು.
ವೀರಶೈವ ಕಲ್ಯಾಣ ಮಂಟಪದಲ್ಲಿ ಕನ್ನಡ ಜಾನಪದ ಪರಿಷತ್‌ನಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ಈ ನೆಲದಲ್ಲಿ ಚಿನ್ನದಷ್ಟೇ ವಿಪುಲವಾದ ಜನಪದ ಕಲೆಗಳ ಕಣಜ ಬತ್ತಿಲ್ಲ. ನಮ್ಮ ಜನಮಾನಸ ಸಂಸ್ಕೃತಿಯಿಂದ ಜನಪದ ಕಲೆಗಳನ್ನು, ಜಾನಪದ ಸಂಪತ್ತನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಸಾಂಪ್ರದಾಯಿಕ, ಕೃಷಿ ಹಾಗೂ ಗ್ರಾಮೀಣ ಹಾಡುಗಳು ಕಡಿಮೆಯಾಗಿ ಅಳಿವಿನ ಅಂಚಿನಲ್ಲಿವೆ. ಜಾಗತೀಕರಣ ಬೆಳೆದು ಜನಪದಕ್ಕೆ ಧಕ್ಕೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಜನಪದ ಸಾಹಿತ್ಯಮತ್ತು ಕಲೆ ಎರಡನ್ನೂ ಒಟ್ಟೊಟ್ಟಿಗೆ ನೋಡಬೇಕಾಗಿದೆ. ಕಲೆ ಮತ್ತು ಸಾಹಿತ್ಯಗಳು ಜನಪದ ಸಂಸ್ಕೃತಿಯ ನಂಟು ಹೊಂದಿವೆ ಎಂದು ಡಾ.ಸರ್ವಮಂಗಳ ಸಕ್ರಿ ಹೇಳಿದರು.