ಹುಬ್ಬಳ್ಳಿ: ಸಂಸತ್ತಿನ ಒಳಗೆ ಆಗಂತುಕರು ನಡೆಸಿದ ದಾಳಿಯು ಕೇವಲ ತಿಳಿಗೇಡಿಗಳು ಮಾಡಿರುವಂಥ ಘಟನೆಯಲ್ಲ. ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ಮಾಡಿರುವ ಕೃತ್ಯ. ಇದರಲ್ಲಿ ರಾಜಕೀಯ ಮಾಡುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಾಕಷ್ಟು ಪ್ರಕರಣಗಳು ನಡೆದಿವೆ. ಪಿಸ್ತೂಲ್, ಡ್ರ್ಯಾಗರ್ ತೆಗೆದುಕೊಂಡು ಸಂಸತ್ ಒಳಗೆ ಪ್ರವೇಶ ಮಾಡಿದ್ದರು. ಒಬ್ಬನೇ ವ್ಯಕ್ತಿ ಎರಡು ದಿನ ಒಂದೇ ಪಾಸ್ನಲ್ಲಿ ಸಂಸತ್ಗೆ ಪ್ರವೇಶ ಮಾಡಿದ್ದ. ಇದಕ್ಕೆ ಯಾವ ಸಂಸದರು ಪಾಸ್ ನೀಡಿದ್ದರು ಎಂಬುದು ಗೊತ್ತಿದೆ. ಆದರೆ, ನಾನು ಆ ಬಗ್ಗೆ ಮಾಡನಾಡುವುದಿಲ್ಲ. ಇಂಥವೆಲ್ಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ನಡೆಯುವುದಿಲ್ಲ. ಇದನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿ, ರಾಜಕೀಯ ಮಾಡಬಹುದು. ಆದರೆ, ನಾವು ಅದನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದೆ ಇಂಥ ಘಟನೆ ನಡೆಯದಂತೆ ಕಠಿಣ ಕ್ರಮಕ್ಕೆ ಚಿಂತನೆ ನಡೆಸಿದ್ದೇವೆ. ಜೀರೋ ಭಯೋತ್ಪಾದಕತೆ ಮೋದಿ ಸರ್ಕಾರದ ನಿರ್ಧಾರ. ಈ ಹಿಂದಿನ ಸ್ಪೀಕರ್ ತೆಗೆದುಕೊಂಡ ಕ್ರಮಕ್ಕಿಂತ ಈಗಿನ ಸ್ಪೀಕರ್ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು. ನಾವೆಲ್ಲರೂ ಒಟ್ಟಾಗಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಶಾಸಕರು ಭಾಗಿಯಾದ ವಿಚಾರ ಕುರಿತು ಬೆಂಗಳೂರಿನಲ್ಲಿ ನಾಳೆ ರಾಜ್ಯಾಧ್ಯಕ್ಷರಿಂದ ಮಾಹಿತಿ ಪಡೆಯುವೆ. ಶಾಸಕರಿಂದ ಏನಾದರೂ ವಿವರಣೆ ಕೇಳಬೇಕಾ ಅಥವಾ ಮುಂದೆ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ ಎಂದರು.
136 ಶಾಸಕರಿಗೆ ಸ್ಥಾನ ನೀಡಲು ಕಾಂಗ್ರೆಸ್ನಲ್ಲಿ ಜಾಗ, ಸಮಯ, ವ್ಯವಧಾನ ಇಲ್ಲ. ಡಿ.ಕೆ. ಶಿವಕುಮಾರ ಸುಮ್ಮನೆ ಹೇಳುತ್ತಾರೆ. ಕಾಂಗ್ರೆಸ್ಗೆ ಬರುವವರನ್ನು ತೆಗೆದುಕೊಳ್ಳಲು ಅವರಿಗೂ ಆಗುವುದಿಲ್ಲ. ಬೇರೆಯವರನ್ನು ಪಕ್ಷಕ್ಕೆ ತೆಗೆದುಕೊಂಡರೆ ನಾವು ಪಕ್ಷದಿಂದ ಹೊರಹೋಗುತ್ತೇವೆಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ಅವರು ಯಾರು ಅಂತ ನನಗೆ ಗೊತ್ತು, ಆದರೆ ನಾವು ಅವರ ಹೆಸರು ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಬರುವ ಎಲ್ಲ ಚುನಾವಣೆಯಲ್ಲಿ ಸೋಲುತ್ತದೆ. ಮಾಜಿ ಸಚಿವ ವಿ. ಸೋಮಣ್ಣ ಅವರು ನನ್ನ ಜತೆಗೆ ಮಾತನಾಡಿದ್ದಾರೆ. ಅಧಿವೇಶನ ಮುಗಿದ ಬಳಿಕ ನಾನು ಕುಳಿತು ಅವರ ಜತೆ ಮಾತನಾಡುತ್ತೇನೆ. ಏನೇ ಸಮಸ್ಯೆ ಇದ್ದರೂ ಬಗೆಹರಿಸಿಕೊಳ್ಳುತ್ತೇವೆ ಎಂದರು.
ಮತಾಂಧನ ಹೆಸರಿಟ್ಟರೆ ಜನರಿಂದ ತಕ್ಕ ಉತ್ತರ: ತುಷ್ಟೀಕರಣ ರಾಜಕೀಯವನ್ನು ಜನರು ಸಹಿಸುವುದಿಲ್ಲ. ಈಗಾಗಲೇ ಟಿಪ್ಪು, ಔರಂಗಜೇಬ ಎಂದು ಕಾಂಗ್ರೆಸ್ನವರು ಸೋತಿದ್ದರು. ನಮ್ಮ ಕೆಲ ತಪ್ಪಿನಿಂದ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಐದು ರಾಜ್ಯಗಳಲ್ಲಿ ಒಂದು ರಾಜ್ಯ ಬಿಟ್ಟು ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಇದಕ್ಕೆ ಕಾಂಗ್ರೆಸ್ ತುಷ್ಟೀಕರಣ, ಇಬ್ಬಗೆಯ ನೀತಿಯೇ ಕಾರಣ ಎಂದು ಸಚಿವ ಜೋಶಿ ಟೀಕಿಸಿದರು.
ಒಬ್ಬ ಮತಾಂಧ ವ್ಯಕ್ತಿಯ ಹೆಸರು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಒಬ್ಬ ದುಷ್ಟ ಹಿಂದು ವಿರೋಧಿ, ಮತಾಂಧನ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಟ್ಟರೆ ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ಹರಿಹಾಯ್ದರು.