ಮಂಡ್ಯ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು ಮದ್ದೂರು ಗಡಿಭಾಗದ ನಿಡಘಟ್ಟದಿಂದ ಸಿದ್ದಲಿಂಗಪುರ ವ್ಯಾಪ್ತಿಯೊಳಗೆ ಅಂದರೆ ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 62 ಕಿ.ಮೀ ಮಾನವ ಸರಪಳಿ ರಚಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲಾಧಿಕಾರಿ ಕಚೇರಿ ಸಭಾಂಗಾಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾನವ ಸರಪಳಿ ರಚಿಸುವ ಸಂಬಂಧ 17 ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಪ್ರತಿ ಒಂದು ಕಿ.ಮೀ.ಗೆ 62 ತಾಲೂಕು ಮಟ್ಟದ ಅಧಿಕಾರಿಗಳನ್ನು ವಲಯ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದರು.
ಇದಲ್ಲದೆ ಪ್ರತಿ ಒಂದು ಕಿ.ಮೀ.ಗೆ 1000 ಜನರು/ವಿದ್ಯಾರ್ಥಿಗಳು ಬೇಕಾಗುತ್ತಾರೆ. ಅವರನ್ನು ಸಂಘಟಿಸಿ ವ್ಯಕ್ತಿವಾರು ಸೆ.15 ರಂದು ಭಾಗವಹಿಸುವವರ ಪಟ್ಟಿ ಸಿದ್ಧಪಡಿಸಬೇಕು. ಯಾವುದೇ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಸರಪಳಿ ಪ್ರಾರಂಭವಾಗುವ ನಿಡಘಟ್ಟದಲ್ಲಿ ನಾಲ್ಕು ಕಲಾತಂಡ ಹಾಗೂ ಶಾಲಾಬ್ಯಾಂಡ್ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಬೇಕು. ಶಿಕ್ಷಣ ಇಲಾಖೆಯವರು ಬ್ಯಾಂಡ್ ತಂಡಗಳಿಗೆ ತರಬೇತಿ ನೀಡಿ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಬೇಕು ಎಂದರು.
ಸರಪಳಿ ರಚನೆಯಲ್ಲಿ ಭಾಗವಹಿಸುವ ಮಕ್ಕಳನ್ನು ಅವರಿಗೆ ನಿಗದಿಪಡಿಸುವ ಸ್ಥಳಕ್ಕೆ ದೂರವಿದ್ದಲ್ಲಿ ವಾಹನದ ವ್ಯವಸ್ಥೆ ಮಾಡಬೇಕು. ಸರ್ವೀಸ್ ರಸ್ತೆಯಲ್ಲಿ ಸರಪಳಿ ರಚಿಸುವುದರಿಂದ ಮಕ್ಕಳು ಹೆದ್ದಾರಿಯಲ್ಲಿ ಓಡಾಡುವುದು, ರಸ್ತೆ ದಾಟುವುದು ಮಾಡದಂತೆ ನೋಡಿಕೊಳ್ಳಬೇಕು. ಇದಕ್ಕೆ ಪೊಲೀಸ್ ಇಲಾಖೆಯಿಂದ ಅಲ್ಲಲ್ಲಿ ಬಂದೋಬಸ್ ವ್ಯವಸ್ಥೆ ಮಾಡಬೇಕು. ವಲಯ ಹಾಗೂ ನೋಡಲ್ ಅಧಿಕಾರಿಗಳು ತಮಗೆ ನಿಗದಿಪಡಿಸಿರುವ ಸ್ಥಳಕ್ಕೆ ಭೇಟಿ ನೀಡಿ ಹಾಗೂ ಸ್ಥಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು/ ಸಾರ್ವಜನಿಕರ ಹೆಸರಿನ ಪಟ್ಟಿಯನ್ನು ಸೆ.11ರೊಳಗಾಗಿ ಸಿದ್ಧಪಡಿಸಿಕೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಂಜೀವಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಡಿಡಿಪಿಐ ಶಿವರಾಮೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.