ಮೈಸೂರು: ಪ್ರಜಾಪ್ರಭುತ್ವಕ್ಕಾಗಿ ಕರ್ನಾಟಕದಲ್ಲಿ ಮಾನವ ಸರಪಳಿ (ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯ) ಎಂಬ ಧ್ಯೇಯವಾಕ್ಯದೊಂದಿಗೆ ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದ್ದು, ಈ ಸಂಬಂಧ ಜಿಲ್ಲಾದ್ಯಂತ 60 ಕಿ.ಮೀ. ಮಾನವ ಸರಪಳಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.
ಈ ಕಾರ್ಯಕ್ರಮ ಕುರಿತು ಚರ್ಚಿಸಿಲು ನಗರದ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ಎಂಬುದು ಕೇವಲ ಅಧಿಕಾರಿಗಳದ್ದಲ್ಲ. ಇದು ಪ್ರತಿಯೊಬ್ಬ ವ್ಯಕ್ತಿಯದ್ದಾಗಿದೆ. ಇಂತಹ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸ್ವಯಂ ಇಚ್ಛೆಯಿಂದ ಪಾಲ್ಗೊಂಡಾಗ ಮಾತ್ರವೇ ನಿರೀಕ್ಷಿಸಿದ ಪ್ರತಿಫಲ ದೊರೆತು, ಕಾರ್ಯಕ್ರಮಗಳೂ ಯಶಸ್ವಿಯಾಗಲು ಸಾಧ್ಯ. ಹೀಗಾಗಿ ಸರಪಳಿಯು ಏರ್ಪಡುವ ಸ್ಥಳಗಳಲ್ಲಿ ಜನರು ನಮ್ಮೊಂದಿಗೆ ಸಹಕರಿಸಬೇಕು ಎಂದರು.
ಸೆ.15ರಂದು ಬೆಳಗ್ಗೆ 8.30ರಿಂದ 9.30ರ ವರೆಗೆ ಕಾರ್ಯಕ್ರಮ ನಡೆಯಲಿದ್ದು, ಸರಪಳಿಯು ಸಿದ್ದಲಿಂಗಪುರದಿಂದ ಆರಂಭಗೊಳ್ಳುತ್ತದೆ. ಮುಂದುವರಿದಂತೆ ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಇರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮುಂದುವರಿಯುತ್ತದೆ.
ಮಾನವ ಸರಪಳಿಯನ್ನು ನಿರ್ಮಾಣ ಮಾಡಲು ಸುಮಾರು 60 ಸಾವಿರಕ್ಕೂ ಹೆಚ್ಚಿನ ಜನರ ಅವಶ್ಯಕತೆ ಇದ್ದು, ಇದಕ್ಕೆ ಅಧಿಕಾರಿಗಳು, ಶಾಲಾ -ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಪೌರ ಕಾರ್ಮಿಕರು, ಗ್ರಾಮ ಪಂಚಾಯಿತಿಯ ಸದಸ್ಯರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡು ಸರಪಳಿಯು ಯಶಸ್ವಿಗೊಳ್ಳುವಂತೆ ಮಾಡಬೇಕು. ಇದಕ್ಕೆ ವಿದ್ಯಾಸಂಸ್ಥೆಗಳು, ಸಂಘ-ಸಂಸ್ಥೆಗಳು ಹಾಗೂ ಇಲಾಖೆಗಳು ಸಹಕರಿಸಬೇಕು ಎಂದು ಹೇಳಿದರು.
ಸರಪಳಿಯು ಆರಂಭವಾದ ಪ್ರತಿ 100 ಮೀಟರ್‌ಗೆ ಒಬ್ಬರು ಸೆಕ್ಷನ್ ಅಧಿಕಾರಿ, ಪ್ರತಿಯೊಂದು ಕಿಲೋಮೀಟರ್‌ಗೆ ಏರಿಯಾ ಆಫೀಸರ್ ನೇಮಿಸಲಾಗಿರುತ್ತದೆ. ಅವರು ತಮ್ಮ ವ್ಯಾಪ್ತಿಗೆ ಜನರನ್ನು ಸೇರಿಸಿ ಸರಪಳಿಯನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ತಿಳಿಸಿದರು.
ಇದೊಂದು ಸರ್ಕಾರದ ಮಹತ್ವಕಾಂಕ್ಷೆ ಕಾರ್ಯಕ್ರಮ. ಇದನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು. ಮುಂಬರುವ ದಿನಗಳಲ್ಲಿ ಈ ಸಂಬಂಧ ಹಲವಾರು ಸಭೆ ನಡೆಸಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, 60 ಕಿ.ಮೀ.ಮಾನವ ಸರಪಳಿಯನ್ನು ನಿರ್ಮಾಣ ಮಾಡಲು ಜಿಲ್ಲೆಯಲ್ಲಿನ ನಿರ್ದಿಷ್ಟ ಅಂತರಕ್ಕೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದ್ದು, ನೇಮಕಗೊಂಡ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜನರನ್ನು ಸೇರಿಸಿ ಸರಪಳಿ ನಿರ್ಮಿಸಿ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮುಡಾ ಆಯುಕ್ತ ಎ.ಎನ್.ರಘುನಂದನ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ವಿದ್ಯಾಸಂಸ್ಥೆಯ ಮುಖ್ಯಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.