ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ನಿಶ್ಚಿತ ಎಂದು ಸಂಸದ ಜಗದೀಶ ಶೆಟ್ಟರ್ ಭವಿಷ್ಯ ನುಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಉಳಿಸಿಕೊಳ್ಳಲು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದು ಕಾಂಗ್ರೆಸ್ಸಿನವರು. ವಿರೋಧ ಪಕ್ಷವನ್ನು ಜೈಲಿನಲ್ಲಿಟ್ಟು ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ನಾಗರಿಕರ ಮೇಲೆ ನಿರಂತರ ದಬ್ಬಾಳಿಕೆ ನಡೆಸಲಾಯಿತು. ಸಂವಿಧಾನದ ಪೂರ್ವಪೀಠಿಕೆಗೂ ತಿದ್ದುಪಡಿ ತರಲಾಯಿತು. ಸಂವಿಧಾನದ ಮೇಲೆ ಇಷ್ಟೆಲ್ಲ ದಾಳಿ ಮಾಡಿದ ಕಾಂಗ್ರೆಸ್‌ನವರು, ಸಂವಿಧಾನ ತಮ್ಮ ಮನೆಯ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಿ ಹಿಂದುಗಳ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಘಟನೆ ವೇಳೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಬಂಧಿತ ಹಿಂದು ಯುವಕರನ್ನು ಬಿಡುಗಡೆ ಮಾಡುವ ಜತೆಗೆ ದೇಶದ್ರೋಹಿಗಳಿಗೆ ಶಿಕ್ಷೆ ನೀಡಲು ಕ್ರಮವಹಿಸಬೇಕು. ಅಲ್ಪಸಂಖ್ಯಾತರ ತುಷ್ಟೀಕರಣ ನಿಲ್ಲಿಸಿ, ಗೃಹ ಸಚಿವ ಪರಮೇಶ್ವರ್ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈಲ್ವೆ ಕಾಮಗಾರಿ ತ್ವರಿತಕ್ಕೆ ಸೂಚನೆ:
ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಸಭೆ ನಡೆಸಲಾಗಿದೆ. ಈಗಾಗಲೇ 14 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಬೆಳಗಾವಿ-ಧಾರವಾಡ ನೇರ ರೈಲ್ವೆ ಕಾಮಗಾರಿ ತ್ವರಿತವಾಗಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳಗಾವಿ- ಪುಣೆ ವಂದೇ ಭಾರತ್ ರೈಲು ಈಗ ವಾರದಲ್ಲಿ ಮೂರು ದಿನ ಓಡಾಟ ನಡೆಸುತ್ತಿದೆ. ವಾರಪೂರ್ತಿ ಸಂಚಾರ ನಡೆಸುವಂತೆ ಪ್ರಯತ್ನ ಮಾಡುತ್ತೇನೆ. ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ತರುವ ಜವಾಬ್ದಾರಿ ನನ್ನದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.