ವಿಜಯವಾಣಿ ಸುದ್ದಿಜಾಲ ಗುಡಿಬಂಡೆ
ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ನೌಕರರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಕುಮಾರಿ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರು ಹಾಗೂ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಮೂಲಕ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸುವುದು ಹಾಗೂ ಯೋಜನೆಯಡಿ ಸರ್ಕಾರಿ ನೌಕರರ ನೋಂದಾವಣಿ, ಆಯ್ಕೆ ಕುರಿತು ಸೂಚನೆಗಳನ್ನು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯಿಂದ ನೀಡಿರುವ ಸುತ್ತೋಲೆಯಂತೆ ಎಲ್ಲ ಶಿಕ್ಷಕರಿಗೆ ನೀಡಲು ಕ್ರಮವಹಿಸಿ, ಶಿಕ್ಷಕರ ಮಾಹಿತಿಯನ್ನು ಎಚ್‌ಆರ್‌ಎಂಎಸ್‌ನಲ್ಲಿ ಕೇಂದ್ರೀಕರಿಸಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು. ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್ ಖಾತೆಯನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ತೆರೆದು ಸಾಮಾಜಿಕ ಭದ್ರತಾ ಒದಗಿಸಿ, ವಿಮೆ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದರು.
ನೌಕರರ ಸಂಘದ ಕಾರ್ಯದರ್ಶಿ ಮುನಿಕೃಷ್ಣ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ಸಮಸ್ಯೆ ಬಗೆಹರಿಯುವವರೆಗೂ ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಪ್ರಕ್ರಿಯೆ ಮುಂದೂಡಿಕೆ ಶಿಾರಸು, ಆನ್‌ಲೈನ್ ಕೆಲಸಗಳಿಗಾಗಿ ಕ್ಲಸ್ಟರ್ ಹಂತದಲ್ಲಿ ದ್ವಿತೀಯ ದರ್ಜೆ ಸಹಾಯಕರ ನೇಮಕ, ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಖರೀದಿ, ಸರಬರಾಜಿಗಾಗಿ ಏಜೆನ್ಸಿ ವ್ಯವಸ್ಥೆ, ಶಿಕ್ಷಕರ ವೈದ್ಯಕೀಯ ವೆಚ್ಚ ಮರುಪಾವತಿ ಪ್ರಸ್ತಾವನೆ, ಮಂಜೂರಾಗಿರುವ ವೈದ್ಯಕೀಯ ಬಿಲ್‌ಗಳನ್ನು ನಗದೀಕರಣ ಮಾಡಲು ಕೊರತೆ ಇರುವ ಅನುದಾನಕ್ಕಾಗಿ ಮೇಲಧಿಕಾರಿಗಳಿಗೆ ಶಿಫಾರಸ್ಸು, ಶಿಕ್ಷಕರಿಗೆ ಇಲಾಖೆ ಕಾರ್ಯಗಳ ಒತ್ತಡವಿದ್ದು, ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರನ್ನು ಬಿಎಲ್‌ಒ ಕಾರ್ಯದಿಂದ ಕೈ ಬೀಡುವಂತೆ ಒತ್ತಾಯಿಸಿದರು.
ನೌಕರರ ಸಂಘದ ಪದಾಧಿಕಾರಿಗಳಾದ ಬಿ.ಆರ್.ಮಂಜುನಾಥ್, ರಾಜಶೇಖರ್, ಜಿಪಿಟಿ ಶಿಕ್ಷಕರ ಪದಾಧಿಕಾರಿಗಳಾದ ರಾಮಕೃಷ್ಣ, ಮನೋಹರ, ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಇ.ಎನ್.ಶ್ರೀರಾಮರೆಡ್ಡಿ, ಸುಮಿತ್ರಾ, ಶಿಕ್ಷಕರಾದ ರಾಮಚಂದ್ರ, ನಾರಾಯಣಸ್ವಾಮಿ, ಸಿ.ವೈ.ನರಸಿಂಹಪ್ಪ, ರವೀಂದ್ರಗೌಡ, ಜಿ.ವಿ.ನಾಗರಾಜು ಇದ್ದರು.