ಜಿಲ್ಲೆ

ಸಾರಿಗೆ ಸಂಸ್ಥೆ ನಿವೃತ್ತ ನೌಕರರಿಂದ ಎಂಡಿಗೆ ಮನವಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಾಯವ್ಯ ಸಾರಿಗೆ ಸಂಸ್ಥೆ ನೌಕರರ ಮತ್ತು ನಿವೃತ್ತ ನೌಕರರ ಸಂಘ ಹುಬ್ಬಳ್ಳಿ ವಿಭಾಗದಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ನಿವೃತ್ತ ನೌಕರರಿಗೆ ಬರಬೇಕಿದ್ದ 2020ರ ವೇತನ ಪರಿಷ್ಕರಣೆ ಬಾಕಿ ಮತ್ತು ರಜೆ ನಗದೀಕರಣದ ವ್ಯತ್ಯಾಸದ ಬಾಕಿ ಹಣ ನೀಡಬೇಕು. ನಿವೃತ್ತ ನೌಕರರಿಗೆ 2016-17 ರಿಂದ 2019-2020ರವರೆಗಿನ ರಜೆ ನಗದೀಕರಣ ಬಾಕಿಯನ್ನು ತಕ್ಷಣ ನೀಡಬೇಕು. ಸ್ತ್ರೀ ಶಕ್ತಿ ಯೋಜನೆ ಪ್ರಯಾಣಿಕರಿಂದಾಗಿ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸಲು ನಿವೃತ್ತ ನೌಕರರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಈ ನೌಕರರಿಗೆ ಮುಂಗಡ ಆಸನ ಕಾಯ್ದಿರಸಬೇಕು ಎಂದು ಆಗ್ರಹಿಸಿದರು.

ನಿವೃತ್ತ ನೌಕರರಿಗೆ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್, ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ಎಚ್.ಜಿ. ಕೊಪ್ಪದ, ಎ.ಎಚ್. ಜವಳಿ, ಎಸ್.ಎಸ್. ಪಾಟೀಲ, ಎಂ.ಎಂ. ಹಿರೇಮಠ, ಬಿ.ಎಸ್. ದೋತ್ರದ, ಐ.ಸಿ. ವಾಲಿಶೆಟ್ಟಿ, ವಿ.ಐ. ಭದ್ರಾಪೂರ ಹಾಗೂ ಇತರರು ಹಾಜರಿದ್ದರು.