ಜಿಲ್ಲೆ

ಹಾರೋಹಳ್ಳಿ, ಬಿಡದಿಗೂ ಮೆಟ್ರೋ ವಿಸ್ತರಿಸಿ ಕೇಂದ್ರ ಬಜೆಟ್‌ನ ಪ್ರಸ್ತಾವನೆ ಸದ್ಬಳಕೆಗೆ ಜನರ ಒತ್ತಾಯ

ಎಂ.ಎನ್. ಸುರೇಶ್ ಕನಕಪುರ

ಕೇಂದ್ರ ಸರ್ಕಾರ ಗ್ರಾಮೀಣ ಹಾಗೂ ಉಪನಗರಗಳ ಅಭಿವೃದ್ಧಿಗೆ ಮೆಟ್ರೋ ವಿಸ್ತರಿಸುವ ಮಹತ್ತರವಾದ ಯೋಜನೆಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮಧ್ಯಂತರ ಬಜೆಟ್‌ನಲ್ಲಿ ಚಿಕ್ಕಪುಟ್ಟ ಪಟ್ಟಣಗಳಿಗೆ ಮೆಟ್ರೋ ಸೇವೆ ಒದಗಿಸುವ ಬಗ್ಗೆ ಪ್ರಸ್ತಾಪಿಸಿರುವುದರಿಂದ ಈ ಭಾಗಗಳ ಅಭಿವೃದ್ಧಿ ಜತೆಗೆ ಜನರಿಗೂ ಅನುಕೂಲವಾಗುತ್ತದೆ.

ಪ್ರಸ್ತುತ ಹಾರೋಹಳ್ಳಿವರೆಗೆ ಮೆಟ್ರೋ ರೈಲು ಸೇವೆ ಮಾಡಬೇಕಾಗಿದೆ. ಈಗಾಗಲೇ ಬೆಂಗಳೂರು ನಗರದಿಂದ ರೇಷ್ಮೆ ಸಂಸ್ಥೆವರೆಗೂ ಮೆಟ್ರೋ ಸಂಚರಿಸುತ್ತಿದೆ. ಅಲ್ಲಿಂದ ಹಾರೋಹಳ್ಳಿಗೆ ಕೇವಲ 20 ಕಿ.ಮೀ ಇದ್ದು, ಮೆಟ್ರೋ ರೈಲು ಸೇವೆ ವಿಸ್ತರಿಸುವ ಕೆಲಸ ಆಗಬೇಕು ಎಂಬ ಕೂಗು ಹೆಚ್ಚಾಗುತ್ತಿದೆ.

ಇದೇ ರೀತಿ ಬಿಡದಿವರೆಗೂ ಮೆಟ್ರೋ ಸೇವೆ ವಿಸ್ತರಣೆಯಾದರೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ಮತ್ತು ಬಿಡದಿಯ ಜನರಿಗೆ ಅನುಕೂಲವಾಗುತ್ತದೆ. ಕನಕಪುರದಿಂದ ಪ್ರತಿನಿತ್ಯ ಬೆಂಗಳೂರಿಗೆ ತೆರಳುವ ಸಹಸ್ರಾರು ಪ್ರಯಾಣಿಕರಿಗೆ ಮೆಟ್ರೋ ಸೇವೆ ಬಹಳ ಅನುಕೂಲವಾಗುತ್ತದೆ. ಇತ್ತೀಚೆಗೆ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಈ ಯೋಜನೆ ಆಶಾದಾಯಕವಾಗಿದೆ ಎನ್ನುವುದು ಸಾರ್ವಜನಿಕರ ಅನಿಸಿಕೆಯಾಗಿದೆ.

ಕೈಗಾರಿಕೆಗಳಿಗೆ ಮತ್ತಷ್ಟು ಬಲ

ಹಾರೋಹಳ್ಳಿ ಮತ್ತು ಬಿಡದಿ ಕೈಗಾರಿಕಾ ಕ್ಷೇತ್ರಗಳು ಏಷ್ಯಾದಲ್ಲೇ ದೊಡ್ಡ ಕೈಗಾರಿಕಾ ಪ್ರದೇಶಗಳಾಗಿದೆ. ಇಲ್ಲಿಗೆ ಮೆಟ್ರೋ ಸೇವೆ ಒದಗಿಸುವುದರಿಂದ ಕೈಗಾರೀಕರಣಕ್ಕೂ ಮತ್ತಷ್ಟು ಬಲ ಬಂದಂತಾಗುತ್ತದೆ. ಮತ್ತು ನಿರುದ್ಯೋಗ ಸಮಸ್ಯೆಗಳು ಸಹ ಕಡಿಮೆಯಾಗುತ್ತದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮೆಟ್ರೋ ವಿಸ್ತರಣೆ ವಿಷಯವನ್ನು ಪ್ರಸ್ತಾಪಿಸಿದ್ದು, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರದ ಉದ್ದೇಶಿತ ಮೆಟ್ರೋ ಸೇವೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ಹಾರೋಹಳ್ಳಿ ಮತ್ತು ಬಿಡದಿ ಕೇಂದ್ರ ಸ್ಥಾನಗಳವರೆಗೆ ವಿಸ್ತರಿಸಲು ಮುಂದಾಗಬೇಕೆಂಬುದು ಇಲ್ಲಿನ ಜನರ ಒತ್ತಾಸೆಯಾಗಿದೆ.

ಈಗಾಗಲೇ ಕನಕಪುರ ತಾಲೂಕು ನಂಜುಂಡಪ್ಪ ವರದಿಯಂತೆ ಹಿಂದುಳಿದ ಪಟ್ಟಿಯಲ್ಲಿ ಗುರ್ತಿಸಿಕೊಂಡಿದೆ. ಡಿಸಿಎಂ ಡಿಕೆಶಿ ಅವರು ಗಮನ ಹರಿಸಿ ಮೆಟ್ರೋ ರೈಲು ಸೇವೆ ಒದಗಿಸಿದರೆ ಅವರ ಹೆಸರು ಶಾಶ್ವತವಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಾಜ್ಯ ಸರ್ಕಾರದಲ್ಲಿ ಪ್ರಭಾವಿಯಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರ ವಿಸ್ತರಿಸಿರುವ ಮೆಟ್ರೋ ಸೇವೆಯನ್ನು ಹಾರೋಹಳ್ಳಿಯವರೆಗೆ ವಿಸ್ತರಿಸಿದ್ದೇ ಆದಲ್ಲಿ ಸಾರ್ವಜನಿಕರಿಗೆ ಅತ್ಯಂತ ಉಪಯೋಗವಾಗಲಿದೆ.ನಲ್ಲಹಳ್ಳಿ ಶ್ರೀನಿವಾಸ್, ರೈತ ಸಂಘ, ಕನಕಪುರಮೆಟ್ರೋ ಸೇವೆಯನ್ನು ಹಾರೋಹಳ್ಳಿ ಮತ್ತು ಬಿಡದಿಯವರೆಗೆ ವಿಸ್ತರಿಸುವುದರಿಂದ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಕೇಂದ್ರದ ಮುಂಗಡ ಪತ್ರದಲ್ಲಿ ಸೂಚಿಸಿರುವ ಅಂಶಗಳನ್ನು ಉಪುಖ್ಯಮಂತ್ರಿಗಳು ಗಮನದಲ್ಲಿಟ್ಟುಕೊಂಡು ಕಾರ್ಯೋನ್ಮುಖವಾದರೆ ಜನರಿಗೆ ಅನುಕೂಲವಾಗಲಿದೆ. ಸಂಸದ ಡಿ.ಕೆ. ಸುರೇಶ್ ಅವರು ಕೇಂದ್ರದ ಮೇಲೆ ಒತ್ತಡ ಹೇರಿ ಮೆಟ್ರೋ ರೈಲು ಸೌಲಭ್ಯ ಒದಗಿಸಲು ಪೂರಕವಾಗಿ ಕೆಲಸ ಮಾಡಬೇಕಿದೆ.ಅರುಣ್‌ಗೌಡ, ಉದಾರಳ್ಳಿ, ಶ್ರೀರಾಮಸೇನೆ