ಚಿಕ್ಕಮಗಳೂರು: ಅಭಿಮಾನಿಯನ್ನು ಧಾರುಣವಾಗಿ ಹತ್ಯೆಗೈದಿರುವ ನಟ ದರ್ಶನ್ ಹಾಗೂ ಸ್ನೆಹಿತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿಗೆ ಮನವಿ ಸಲ್ಲಿಸಿದರು.
ಮಹಾಸಭಾ ಪ್ರಧಾನ ಕಾರ್ಯದರ್ಶಿ ಪಿ.ಚಂದ್ರಮೌಳಿ ಮಾತನಾಡಿ, ಸಿನಿಮಾ ಶೈಲಿಯಲ್ಲಿ ಅಭಿಮಾನಿ ರೇಣುಕಾ ಸ್ವಾಮಿ ಅವರನ್ನು ಬರ್ಬರವಾಗಿ ಕೊಲೆಗೈದಿರುವುದು ದಿಗ್ಭ್ರಮೆ ಮೂಡಿಸಿದೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ನಟ ದರ್ಶನ್ ಈ ರೀತಿಯ ಪೈಶಾಚಿಕ ಕೃತ್ಯವೆಸಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ದೂರಿದರು.
ನಟ ದರ್ಶನ್ ಸಿನಿಮಾಗಳನ್ನು ನೋಡಿ ಅಭಿಯಾನಿಯಾಗಿದ್ದ ರೇಣುಕಾಸ್ವಾಮಿ ಅವರನ್ನು ಚಿತ್ರಹಿಂಸೆ ನೀಡಿ ಹತ್ಯೆಗೈದಿರುವುದು ಘೋರ ಅಪರಾಧ. ನಾಗರಿಕರು ಈ ಕೃತ್ಯ ಖಂಡಿಸಬೇಕು. ನಾಡಿನ ಸಂಸ್ಕೃತಿ, ಸಂಪ್ರದಾಯ ಎತ್ತಿಹಿಡಿಯಬೇಕಿದ್ದ ನಟ ದರ್ಶನ್ ಈ ನಡೆದುಕೊಂಡಿರುವುದು ಖಂಡನೀಯ ಎಂದರು.
ಇಂತಹ ನಟರಿಂದ ಸಮಾಜದ ಸ್ವಾಸ್ಥ್ಯ ಹಾಳಾಗಲಿದೆ. ಹಣ, ಹೆಸರುಗಳಿಸಿಕೊಂಡು ಕೃತ್ಯವೆಸಗಿರುವುದು ದುರಾದೃಷ್ಟಕರ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ನಟ ದರ್ಶನ್ ಅವರನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ನ್ಯಾಯಸಮ್ಮತ ತೀರ್ಮಾನ ಕೈಗೊಳ್ಳಬೇಕು. ಅಲ್ಲದೇ ಹತ್ಯೆಗೊಳಗಾದ ರೇಣುಕಾ ಸ್ವಾಮಿ ಕುಟುಂಟದ ಜೀನೋಪಾಯಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಮಹಾಸಭಾ ನಿರ್ದೇಶಕ ನಿಶಾಂತ್, ಮುಖಂಡರಾದ ವೀರಭದ್ರಯ್ಯ, ಎ.ಎಸ್.ಎಸ್.ಆರಾಧ್ಯ, ಓಂಕಾರಸ್ವಾಮಿ, ಎಚ್.ಎನ್.ನಟರಾಜ್, ಈಶ್ವರಪ್ಪ, ಉಮೇಶ್, ಕಾಂತರಾಜ್, ಅಶೋಕ್‌ಕುಮಾರ್, ಸುರೇಶ್, ಸಿ.ಆರ್.ಅಶೋಕ್, ಪಂಚಾಕ್ಷರಿ ಮತ್ತಿತರರಿದ್ದರು.