ವಿಜಯಪುರ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂಪಾಯಿ ನಿಶ್ಚಿತ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆ.12 ರಿಂದ ಮೂರು ದಿನ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಆಶಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ ಹೇಳಿದರು.
ಈಗಾಗಲೇ ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಹಮ್ಮಿಕೊಂಡ ಹೋರಾಟದ ವೇಳೆ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಆದರೆ, ಈವರೆಗೂ ಬೇಡಿಕೆ ಈಡೇರಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಏಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ 10 ರೂ. ಗೌರವಧನ ನೀಡಲಾಗುವುದು. ಅಲ್ಲದೇ ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್‌ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ. 10 ನಿಶ್ಚಿತ ವೇತನ ದೊರೆಯುವಂತೆ ಕ್ರಮ ಕೈಗೊಳ್ಳಾಗುವುದೆಂದು ಸರ್ಕಾರ ಭರವಸೆ ನೀಡಿತ್ತು. ಪ್ರಸಕ್ತ ಬಜೆಟ್‌ನಲ್ಲಿ ಎಲ್ಲ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸಿದಂತೆ ಅಂಗನವಾಡಿ ಕಾರ್ಯಕತೆರ್ಯರಿಗೂ ವೇತನ ಹೆಚ್ಚಿಸುವುದಾಗಿ ತಿಳಿಸಿತ್ತು. ಆದರೆ, ಈವರೆಗೆ ಬೇಡಿಕೆ ಈಡೇರಿಸಿಲ್ಲ ಎಂದರು.
ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ದಿಢೀರನೆ ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. 60 ವರ್ಷ ವಯಸ್ಸಿನ ಆಶಾ ಕಾರ್ಯಕರ್ತೆಯರಿಗೆ ನಿವೃತ್ತಿ ಮಾಡಿದ್ದಾರೆ. 17 ವರ್ಷದಿಂದ ಸೇವೆ ಮಾಡಿದ ಆಶಾಗೆ ಯಾವುದೇ ಪರಿಹಾರ ನೀಡದೆ ಬೀದಿಗೆ ತಳ್ಳಿದ್ದಾರೆ. ಸದ್ಯ ಕಾರ್ಯ ನಿರ್ವಹಿಸುವ ಸುಮಾರು 41000 ಆಶಾಗಳಿಗೆ ಅವರ ಕೆಲಸದ ಮೌಲ್ಯಮಾಪನ ಮಾಡುವ ಆದೇಶ ಹೊರಡಿಸಿ ವಿವಿಧ ರೀತಿಯಲ್ಲಿ ಮೌಲ್ಯಮಾಪನ ಮಾಡಿಸುತ್ತಿದ್ದಾರೆ. ಮೌಲ್ಯಮಾಪನದ ಮಾದರಿಯನ್ನು ಸಂಘದಿಂದ ಸಂಪೂರ್ಣವಾಗಿ ವಿರೋಧಿಸುತ್ತೇವೆ. ಕಾರಣ ಮೌಲ್ಯಮಾಪನ ಮಾದರಿಯಲ್ಲಿ ಸಾಕಷ್ಟು ತಾಂತ್ರಿಕ ತೊಂದರೆಗಳಿವೆ ಎಂದರು.
ಮುಖ್ಯಮಂತ್ರಿಗಳು ಘೋಷಿಸಿದ ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ ರೂ.10 ಸಾವಿರ ನಿಶ್ಚಿತ ವೇತನ ನೀಡುವಂತೆ ಆದೇಶ ಹೊರಡಿಸಬೇಕು. 2025 ಮಾರ್ಚ್‌ನಲ್ಲಿ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ಎಲ್ಲ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ರೂ. 1000 ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆಯೇ ಎಲ್ಲ ಆಶಾ ಕಾರ್ಯಕರ್ತೆಯರಿಗೂ ಹೆಚ್ಚಳ ಮಾಡಬೇಕು. ತರ್ಕಬದ್ದಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಡಿಡಬೇಕು. ಈ ಹೆಸರಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ಅವೈಜ್ಞಾನಿಕವಾಗಿರುವ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು. ನಗರ ಆಶಾಗಳಿಗೆ ರೂ.2000 ಗೌರವಧನ ಹೆಚ್ಚಿಸಬೇಕು. 2025 ಜೂನ್-ಜುಲೈನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಹೋರಾಟದ ಮೂಲಕ ಹಕ್ಕೊತ್ತಾಯ ಮಂಡಿಸಲಾಗುವುದೆಂದು ಮಲ್ಲಿಕಾರ್ಜುನ ತಿಳಿಸಿದರು.
ಪ್ರಮುಖರಾದ ಲಕ್ಷ್ಮಿ ಸೀಮಿಕೇರಿ, ಬಸಮ್ಮ ಹೆಳವರ, ಅಂಬಿಕಾ ಒಳಸಂಗ, ಮಲ್ಲಮ್ಮ ಹರಿಜನ, ಸುಮಂಗಲಾ ಪಡಸಾಲಿ, ಬಸಮ್ಮ ಗು. ಪಾಟೀಲ, ಮಲ್ಲಮ್ಮ ಬಿ. ಕಂಠಿ. ಹಾಗೂ ಶಿವಬಾಳಮ್ಮ ಕೊಂಡಗೂಳಿ, ಶಿವರಂಜನಿ ಎಸ್.ಬಿ ಮತ್ತಿತರರಿದ್ದರು.