ಜಿಲ್ಲೆ

ಉಳ್ಳಾಗಡ್ಡಿಗೂ ಬರಲಿದೆ ಡಿಮಾಂಡ್?

Haveri - Desk - Ganapati Bhat

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಟೊಮ್ಯಾಟೊ ಬೆಳೆಗೆ ಇಸಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ಬೆಲೆ ಬಂದಿದೆ. ಹೀಗಾಗಿ ಎಲ್ಲೆಡೆ ಈಗ ಟೊಮ್ಯಾಟೊ ದರದ ಬಗ್ಗೆಯೇ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಉಳ್ಳಾಗಡ್ಡಿಗೂ ಹೆಚ್ಚಿನ ದರ ಬಂದರೆ ಆಶ್ಚರ್ಯಪಡಬೇಕಿಲ್ಲ.

ಇದಕ್ಕೆ ಕಾರಣ ಈ ಬಾರಿ ಉಳ್ಳಾಗಡ್ಡಿ ಬೆಳೆಯುವ ಕ್ಷೇತ್ರ ಗಣನೀಯವಾಗಿ ಕುಸಿತವಾಗಿರುವುದು. ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಉಳ್ಳಾಗಡ್ಡಿ ಬೆಳೆ, ಕ್ಷೇತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅತಿ ಕಡಿಮೆಯಾಗಿದೆ. ಹೀಗಾಗಿ ಈರುಳ್ಳಿ ಆವಕ ಕಡಿಮೆಯಾಗಿ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕಳೆದ ಎರಡು-ಮೂರು ವರ್ಷಗಳ ಹಿಂದೆ ರಾಣೆಬೆನ್ನೂರ ತಾಲೂಕಿನಲ್ಲಿ 4 ಸಾವಿರದಿಂದ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗುತ್ತಿತ್ತು. ಕಳೆದ ವರ್ಷ 2 ಸಾವಿರ ಹೆಕ್ಟೇರ್ ಮಾತ್ರ ಉಳ್ಳಾಗಡ್ಡಿ ಬಿತ್ತನೆ ಮಾಡಲಾಗಿದೆ. ಆದರೆ, ಪ್ರಸಕ್ತ ವರ್ಷ ಈವರೆಗೆ 300 ಹೆಕ್ಟೇರ್​ನಷ್ಟು ಪ್ರದೇಶದಲ್ಲಿ ಮಾತ್ರ ಉಳ್ಳಾಗಡ್ಡಿ ಬಿತ್ತನೆ ಮಾಡಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಹದಬರಿತ ಮಳೆಯಾದರೆ ಮೇ ತಿಂಗಳ ಕೊನೆಯ ವಾರದಿಂದ ಜುಲೈ ತಿಂಗಳ ವರೆಗೆ ಉಳ್ಳಾಗಡ್ಡಿ ಬಿತ್ತನೆ ಮಾಡಲು ಉತ್ತಮ ವಾತಾವರಣ. ಆದರೆ, ಈ ವರ್ಷ ಮಳೆರಾಯನ ಅವಕೃಪೆಯಿಂದ ರೈತರು ಉಳ್ಳಾಗಡ್ಡಿ ಬಿತ್ತನೆ ಮಾಡಲು ಹಿಂದೇಟು ಹಾಕಿದ್ದಾರೆ. ಕೆಲ ರೈತರು ಜೂನ್ ಮೊದಲ ವಾರದಲ್ಲಿ ಮಳೆಯ ನಿರೀಕ್ಷೆ ಹೊಂದಿ ಈರುಳ್ಳಿ ಬಿತ್ತನೆ ಮಾಡಿದ್ದರು. ಆದರೆ, ಆರಂಭದಲ್ಲಿ ಮಳೆ ಕೈಕೊಟ್ಟಿದ್ದರಿಂದ ಉಳ್ಳಾಗಡ್ಡಿ ಬದಲು ಪರ್ಯಾಯ ಬೆಳೆ ಬೆಳೆಯಲು ಮುಂದಾದರು.

ಇದೀಗ 15 ದಿನದಿಂದ ಉತ್ತಮ ಮಳೆಯಾಗಿದೆ. ಆದರೆ, ಬಿತ್ತನೆ ಸಮಯ ಮುಗಿದು ಹೋಗಿದ್ದರಿಂದ ರೈತರು ಉಳ್ಳಾಗಡ್ಡಿ ಬೆಳೆಯಲು ಮುಂದಾಗಿಲ್ಲ. ಬದಲಾಗಿ ಖಾಲಿ ಬಿಟ್ಟಿದ್ದ ಜಮೀನುಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದಾರೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಕಾರಣದಿಂದ ಉಳ್ಳಾಗಡ್ಡಿ ಬೆಳೆಯ ಕ್ಷೇತ್ರದ ಮೇಲೆ ಪರಿಣಾಮ ಬಿರುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉಳ್ಳಾಗಡ್ಡಿ ಬೆಲೆ ಹೆಚ್ಚಳವಾದರೂ ಅಚ್ಚರಿ ಪಡಬೇಕಿಲ್ಲ.

ಪ್ರತಿ ಬಾರಿಯೂ ನಷ್ಟ

ಒಂದಲ್ಲ ಒಂದು ಕಾರಣದಿಂದ ಬೆಳೆಗಾರು ನಷ್ಟ ಅನುಭವಿಸಬೇಕಾದ್ದರಿಂದ ರೈತರು ಉಳ್ಳಾಗಡ್ಡಿ ಬೆಳೆಯನ್ನು ಕೈಬಿಡಲು ಪ್ರಮುಖ ಕಾರಣವಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ ಬೆಳೆದ ಉಳ್ಳಾಗಡ್ಡಿ ಕ್ವಿಂಟಾಲ್​ಗೆ 400 ರೂಪಾಯಿಗೆ ಮಾರಾಟವಾಗಿತ್ತು. ಅದೇ ನಾಸಿಕ ಉಳ್ಳಾಗಡ್ಡಿ ಮಾರುಕಟ್ಟೆಗೆ ಬಂದಾಗ 2 ಸಾವಿರ ರೂ.ಗೆ ಮಾರಾಟ ಮಾಡಲಾಗಿತ್ತು. ಅಲ್ಲದೆ, ಉಳ್ಳಾಗಡ್ಡಿ ಸಂಸ್ಕರಣೆ ಮಾಡಿ ಮಾರಾಟ ಮಾಡಲು ಆಗುವುದಿಲ್ಲ. ಹೀಗಾಗಿ ಸ್ಥಳೀಯ ರೈತರು ಉಳ್ಳಾಗಡ್ಡಿ ಸಹವಾಸವೇ ಬೇಡ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ.

ಉಳ್ಳಾಗಡ್ಡಿ ಬೆಳೆಯುವುದನ್ನು ಬಿಟ್ಟಿದ್ದೇವೆ. ಉಳ್ಳಾಗಡ್ಡಿ ಗೂಡು ಹಾಕಿದಾಗ ಹಳಸುವುದು. ಮಳೆಗೆ ಕೊಚ್ಚಿ ಹೋಗುವುದು ಹಾಗೂ ಬೆಳೆ ಬಂದಾಗ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಮಾಡುವ ದಲ್ಲಾಳಿಗಳು. ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸಿ ಬೇಸರವಾಗಿದೆ. ಹೀಗಾಗಿ ಕ್ಷೇತ್ರ ಕಡಿಮೆ ಮಾಡಿ ಬೇರೆ ಬೆಳೆ ಬೆಳೆದಿದ್ದೇವೆ. | ಶಂಕ್ರಪ್ಪ ನಾರಜ್ಜಿ, ಸ್ಥಳೀಯ ರೈತ ತಾಲೂಕಿನಲ್ಲಿ ಉಳ್ಳಾಗಡ್ಡಿ ಬೆಳೆಯ ಕ್ಷೇತ್ರ ಕಡಿಮೆಯಾಗುತ್ತಿದೆ. ನಮ್ಮ ತಾಲೂಕಿನಲ್ಲಿ ಕಳೆದ ವರ್ಷ 2 ಸಾವಿರ ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು. ಆದರೆ, ಪ್ರಸಕ್ತ ವರ್ಷ ಆರಂಭ ದಿನದ ಮಳೆ ಕೊರತೆ ಸೇರಿ ಅನೇಕ ಕಾರಣದಿಂದ ಕೇವಲ 300 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. | ನೂರಅಹ್ಮದ ಹಲಗೇರಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ