ಜಿಲ್ಲೆ

ಕಾನೂನು ಕಠಿಣಗೊಳಿಸಲು ಒತ್ತಾಯ

ಎನ್.ವೆಂಕಟೇಶ್

ಶಿಡ್ಲಘಟ್ಟದಲ್ಲಿ ಕೆಂಪುಪಟ್ಟಿ ಧರಿಸಿ ಮೌನ ಪ್ರತಿಭಟನೆ | ವಕೀಲರ ಪರಿಷತ್ ಸದಸ್ಯ ಮೇಲಿನ ಹಲ್ಲೆಗೆ ಖಂಡನೆ

ಶಿಡ್ಲಘಟ್ಟ: ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸದಾಶಿವರೆಡ್ಡಿ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಖಂಡಿಸಿ ಶಿಡ್ಲಘಟ್ಟದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ವಕೀಲರು ಸೋಮವಾರ ಕೆಂಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ಬಳಿಕ ಬೈಕ್ ರ‌್ಯಾಲಿ ಮೂಲಕ ತಾಲೂಕು ಕಚೇರಿಗೆ ತೆರಳಿ ಸದಾಶಿವರೆಡ್ಡಿ ಮೇಲಿನ ಹಲ್ಲೆಯನ್ನು ಖಂಡಿಸಿ, ತಹಸೀಲ್ದಾರ್ ಬಿ.ಎನ್.ಸ್ವಾಮಿ ಅವರ ಮುಖಾಂತರಚ ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ಹಿರಿಯ ವಕೀಲ, ಭಾರತೀಯ ವಕೀಲರ ಪರಿಷತ್ ಸದಸ್ಯ ವೈ.ಆರ್.ಸದಾಶಿವರೆಡ್ಡಿ ಮೇಲೆ ಅವರ ಕಚೇರಿಯಲ್ಲಿಯೇ ದುಷ್ಕರ್ಮಿಗಳು ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ ಘಟನೆಯನ್ನು ಖಂಡಿಸಿದರು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ವಕೀಲರಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕು. ವಕೀಲರ ರಕ್ಷಣೆಗೆ ರೂಪಿಸಿರುವ ಕಾನೂನನ್ನು ಇನ್ನಷ್ಟು ಕಠಿಣವಾಗಿಸಬೇಕು. ವಕೀಲರಿಗೆ ಕರ್ತವ್ಯದ ವೇಳೆ ಸೂಕ್ತ ರಕ್ಷಣೆ ಸಿಗುವಂತಾಗಬೇಕು. ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತ್ವರಿತವಾಗಿ ನ್ಯಾಯ ಒದಗಿಸಬೇಕೆಂದು ಒತ್ತಾಯ ಮಾಡಿದರು.

ವಕೀಲರಾದ ಎಂ.ಪಾಪಿರೆಡ್ಡಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ವಕೀಲರಾದ ಅನಂತ, ರಾಮಕೃಷ್ಣ ಸೇರಿದಂತೆ ಇತರ ವಕೀಲರು ಹಾಜರಿದ್ದರು.