ಜಿಲ್ಲೆ

ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಕೈಬಿಡಲಿ: ಶಾಸಕ ರವಿಕುಮಾರ್ ಗಣಿಗ ಒತ್ತಾಯ

ಕೆ.ಎನ್.ರಾಘವೇಂದ್ರ

ಮಂಡ್ಯ: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಯಿಂದ ನಮ್ಮ ರೈತರಿಗೆ ತೊಂದರೆಯಾಗಲಿದೆ. ಆದ್ದರಿಂದ ಸಂಬಂಧಪಟ್ಟವರು ಕಾಮಗಾರಿ ಕೈಬಿಡುವುದು ಒಳ್ಳೆಯದು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ತಾಲೂಕಿನ ಬಸರಾಳು-ಹುಲ್ಲಹಳ್ಳಿ ವಿತರಣಾ ನಾಲೆಗಳ ತೂಬು ದುರಸ್ತಿ ಮಾಡುವ 99 ಲಕ್ಷ ರೂ ವೆಚ್ಚದ ಕಾಮಗಾರಿಗೆ ಬುಂಡಾರೆಕೊಪ್ಪಲು ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಕುಣಿಗಲ್‌ನಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಯಿಂದ ಬಸರಾಳು ಭಾಗಕ್ಕೆ ನೀರು ಬರುವುದು ಸಮಸ್ಯೆಯಾಗಲಿದೆ. ಇದರಿಂದ ಮುಂದೆ ನಮ್ಮ ರೈತರ ವಿರೋಧ ಎದುರಿಸಬೇಕಾಗುತ್ತದೆ. ಅದರಲ್ಲಿಯೂ ಬಸರಾಳು ಭಾಗ ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ಹೇಮಾವತಿ ನೀರು ಮುಖ್ಯವಾಗಿದೆ. ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮೂಲಕ ಮಾಗಡಿ, ಚನ್ನಪಟ್ಟಣ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋದರೆ ಬಸರಾಳು ಭಾಗಕ್ಕೆ ನೀರು ಬರಲು ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ನಿಲ್ಲಿಸುವಂತೆ ಎಚ್ಚರಿಕೆ ನೀಡಿದರು.

ಬಸರಾಳು-ಹುಲ್ಲಹಳ್ಳಿ ವಿತರಣಾ ನಾಲೆಗಳ ತೂಬು ದುರಸ್ತಿಯಾಗದೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಬಸರಾಳು, ಮುತ್ತೇಗೆರೆ, ಬೇಬಿ, ಕಂಬದಹಳ್ಳಿ, ಹುನುಗನಹಳ್ಳಿ, ನಂದಹಳ್ಳಿ, ಎಂ.ಹಟ್ನ, ಹಾರಕದಹಳ್ಳಿ, ಹುಲ್ಲಹಳ್ಳಿ ಸೇರಿದಂತೆ ಹಾಗೂ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಗ್ರಾಮದ ರೈತ ಜಮೀನಿಗಳಿಗೆ ನೀರು ತಲುಪಲು ಅನುಕೂಲವಾಗಲಿದೆ. ಈ ಅಚ್ಚುಕಟ್ಟು ಪ್ರದೇಶದ ರೈತರು, ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರೊಂದಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ತೂಬುಗಳ ದುರಸ್ಥಿಯಿಂದ ಈ ಭಾಗದ ರೈತರು ಹಾಗೂ ಗ್ರಾಮಸ್ಥರಿಗೆ ಸಾಕಷ್ಟು ಲಾಭವಾಗಲಿದ್ದು, ನೀರಿನ ವಿತರಣಾ ವ್ಯವಸ್ಥೆ ಸುಧಾರಣೆಗೊಳ್ಳಲಿದೆ ಎಂದು ಹೇಳಿದರು.

ಬುಂಡಾರೆಕೊಪ್ಪಲು ಗ್ರಾಮಸ್ಥರಾದ ಕೃಷ್ಣ, ನಾಗಣ್ಣ, ಶಿವರಾಜು ಇತರರಿದ್ದರು.