ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರದಿಂದ ಜನನ, ಮರಣ, ಜಾತಿ, ಆದಾಯ ಪ್ರಮಾಣ ಸಹಿತ ಹಲವು ಸೇವೆಗಳು ಸ್ಥಗಿತಗೊಂಡು ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸರ್ಕಾರ ಅವರ ಸಮಸ್ಯೆ ಬಗೆಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಶಿವು ಬಡಿಗೇರ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಸುಸುಜ್ಜಿತ ಕಚೇರಿ ಸೇರಿ ಸಕಲ ಸೌಲಭ್ಯ ಕಲ್ಪಿಸಬೇಕು. ಗ್ರಾಮ ಆಡಳಿತಾಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ನೀಡಬೇಕು. ಪ್ರಯಾಣ ಭತ್ಯೆಯನ್ನು 500 ರಿಂದ 5000 ಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.
ಮಂಜುನಾಥ ಮಂಗಳಗಟ್ಟಿ ಮಾತನಾಡಿ, 9 ದಿನಗಳಿಂದ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ. ಈವರೆಗೂ ಸಚಿವರು ಅಹವಾಲು ಸ್ವೀಕರಿಸಿಲ್ಲ. ಕೂಡಲೇ ಗ್ರಾಮ ಅಡಳಿತಾಧಿಕಾರಿಗಳ ಮನಮೊಲಿಸಿ ಅವರ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲ ಮಾಡಬೇಕು ಎಂದು ಕೋರಿದರು.
ಶಿವಪ್ಪ ಹಾದಿಮನಿ, ಗಂಗಪ್ಪ ಹಲಗಾರ, ಮಂಜುನಾಥ ಮಂಡಿಹಾಳ, ಕಮಲು ಪೂಲವಾಲೆ, ಇತರರು ಇದ್ದರು.