ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದಲ್ಲಿ ಕುರಿಗಾಹಿಗಳ ಮೇಲೆ ಸಾಕಷ್ಟು ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಸರ್ಕಾರ ಕುರಿಗಾರರ ಹಿತರಕ್ಷಣೆಗೆ ಸೂಕ್ತ ಕಾಯ್ದೆ ಜಾರಿಗೆ ತರಬೇಕು ಎಂದು ಮನಸೂರ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರಿಗಾಹಿಗಳು ಹಗಲು ರಾತ್ರಿ ಎನ್ನದೇ ಬೆಟ್ಟ ಗುಡ್ಡಗಳಲ್ಲಿ ಸಂಚರಿಸುತ್ತಾರೆ. ಹೊಲಗಳಲ್ಲೇ ತಿಂಗಳು ಗಟ್ಟಲೆ ವಾಸ್ತವ್ಯ ಮಾಡುತ್ತಾರೆ. ಕುರಿಗಾಹಿಗಳಿಗೆ ರಕ್ಷಣೆ ಇಲ್ಲವಾಗಿದೆ. ಕುರಿ ಸಾಕಣೆ ಮತ್ತು ಪಶುಸಂಗೋಪನೆಯಲ್ಲಿ ತೊಡಗಿರುವ ಕುಟುಂಬಗಳಿಗೆ ಸರ್ಕಾರ ರಕ್ಷಣೆ ನೀಡಬೇಕು ಎಂದರು.
ನವಲೂರಿನ ಕುರುಗಾಹಿ ಅಶೋಕ ಕಿತ್ತೂರ ಅವರ 25 ಕುರಿ ಮರಿಗಳನ್ನು ತೋಳಗಳು ಸಾಯಿಸಿವೆ. ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಇದಲ್ಲದೆ ಮುಂದಿನ ದಿನಗಳಲ್ಲಿ ಬಜೆಟ್ ಪೂರ್ವದಲ್ಲಿ ಕುರಿಗಾಹಿಗಳ ಸಮಸ್ಯೆ ಆಲಿಸಬೇಕು. ದಲ್ಲಾಳಿಗಳ ಮುಕ್ತ ಮಾರುಕಟ್ಟೆ ತೆರೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಂಜುನಾಥ ಕಿತ್ತೂರ, ಪ್ರಕಾಶ ಕಿತ್ತೂರ, ಮಂಜುನಾಥ ಇಂಗಳಹಳ್ಳಿ, ಮಲ್ಲಿಕಾರ್ಜುನ , ಇತರರು ಇದ್ದರು.