ಗುಂಡ್ಲುಪೇಟೆ: ಕಾಡು ಪ್ರಾಣಿಗಳ ಹಾವಳಿ ತಡೆ ಮತ್ತು ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರಕ್ಕೆ ಸೆ.30ರೊಳಗಾಗಿ ಸರ್ಕಾರ ಮುಂದಾಗಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ ಮನೆ ಮುಂದೆ ನಿರಂತರ ಧರಣಿ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರೂ ಯಾವುದೇ ಉಪಯೋಗವಾಗಿಲ್ಲ. ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂ. ದರ ನಿಗದಿ ಮಾಡಬೇಕು. ಕಾರ್ಖಾನೆಯ ಮುಂಭಾಗ ಎಪಿಎಂಸಿ ಮೂಲಕ ತೂಕದ ಯಂತ್ರ ಅಳವಡಿಸಬೇಕು. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಮೋಸವಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಹೊಸ ಸಂಪರ್ಕ ಪಡೆಯಲು ಅಕ್ರಮ ಸಕ್ರಮ ಯೋಜನೆ ಮರು ಜಾರಿ ಮಾಡಬೇಕು. ಪಂಪ್‌ಸೆಟ್‌ಗಳ ಆರ್‌ಆರ್ ನಂಬರ್‌ಗೆ ಆಧಾರ್ ಲಿಂಕ್ ಮಾಡುವುದನ್ನು ಕೈಬಿಡಬೇಕು. ಹಾಲು ಉತ್ಪಾದಕರಿಗೆ ಸರ್ಕಾರದಿಂದ ಕೊಡುತ್ತಿದ್ದ ಕಳೆದ ವರ್ಷದ ಪ್ರೋತ್ಸಾಹ ಧನದ 700 ಕೋಟಿ ಬಾಕಿಯನ್ನು ಕೂಡಲೇ ನೀಡಬೇಕು. ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಬೆಳೆಗಳಿಗೂ ಕಾನೂನು ಬದ್ಧ ಎಂಎಸ್‌ಪಿ ಘೋಷಣೆ ಮಾಡಬೇಕು. ಖರೀದಿ ಕೇಂದ್ರಗಳನ್ನು ಯಾವುದೇ ಷರತ್ತುಗಳಿಲ್ಲದೆ ಕಟಾವು ಮುನ್ನವೇ ಹೋಬಳಿ ಕೇಂದ್ರಗಳಲ್ಲಿ ತೆರೆಯಲು ಕ್ರಮ ಕೈಗೊಳ್ಳಬೇಕು. ಕಾಡು ಪ್ರಾಣಿಗಳ ಹಾವಳಿ ತಡೆಗೆ ವಿಶೇಷ ಕಾರ್ಯಕ್ರಮವನ್ನು ಕೈಗೊಳ್ಳುವ ಜತೆಗೆ ಕಾಡು ಹಂದಿ, ನವಿಲು ಹಾಗೂ ಜಿಂಕೆಗಳಿಂದಾದ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ಮಳೆ ಗಾಲಿಯಿಂದ ನಷ್ಟ ಹೊಂದಿರುವ ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮೂಲಕ ಬೆಳೆ ನಷ್ಟ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸಂಘ ನಿರಂತರ ಚಳವಳಿ ನಡೆಸಿದರೂ ಸರ್ಕಾರ ಕ್ರಮ ಕೈಗೊಳ್ಳದ ಕಾರಣ ಮುಖ್ಯಮಂತ್ರಿ ನಿವಾಸದ ಮುಂದೆ ನಿರಂತರ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿಗಳು ಮೈಸೂರಿಗೆ ಬಂದಾಗ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಸಿಎಂ ಮನೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಮಲೆಯೂರು ಮಹೇಂದ್ರ, ತಾಲೂಕು ಅಧ್ಯಕ್ಷ ಮಣಿಕಂಠ, ಮಾದೇವನಾಯಕ, ಶ್ರೀನಿವಾಸ್, ಗೋವಿಂದ ನಾಯ್ಕ, ವೆಂಕಟನಾಯ್ಕ, ನಟರಾಜ್ ಇದ್ದರು.