ಜಿಲ್ಲೆ

ಬ್ರಹ್ಮಾವರ ಡಿಪ್ಲೊಮಾ ಕೃಷಿ ಕಾಲೇಜು ಮುಚ್ಚಿಸಲು ಹುನ್ನಾರ

ಗೋಪಾಲಕೃಷ್ಣ ಪಾದೂರ್

ಉಡುಪಿ: ಬ್ರಹ್ಮಾವರ ಡಿಪ್ಲೊಮಾ ಕೃಷಿ ಕಾಲೇಜಿನಲ್ಲಿ ಈ ವರ್ಷದಿಂದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನಿರಾಕರಿಸಲಾಗುತ್ತಿದ್ದು, ಸರ್ಕಾರ ಕಾಲೇಜು ಮುಚ್ಚಿಸಲು ಹುನ್ನಾರ ನಡೆಸಿದೆ. ಕೃಷಿ ಕೇಂದ್ರದ ಆವರಣದಲ್ಲಿ ಕಾನೂನು ಬಾಹಿರವಾಗಿ ಘನತ್ಯಾಜ್ಯ ಘಟಕ ಸ್ಥಾಪಿಸಿ, ಕಾಲೇಜಿನ ಸಂಶೋಧನಾ ಕೇಂದ್ರದ ಕೃಷಿ ಚಟುವಟಿಕೆಗಳಿಗೆ ತೊಡಕು ಉಂಟು ಮಾಡಿದೆ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆಕ್ರೋಶವ್ಯಕ್ತಪಡಿಸಿದರು.

ಬುಧವಾರ ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಕಾರಿ ಕಚೇರಿ ಬಳಿ ಕೃಷಿ ಕಾಲೇಜು ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಬ್ರಹ್ಮಾವರ ಡಿಪ್ಲೊಮಾ ಕೃಷಿ ಕಾಲೇಜು ಉಳಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕೃಷಿ ಆಧರಿತ ಕರಾವಳಿ ಜಿಲ್ಲೆಗೆ ಕೃಷಿ ಪದವಿ ಕಾಲೇಜಿನ ಅಗತ್ಯವಿದೆ. ಹೀಗಾಗಿ ಬ್ರಹ್ಮಾವರದಲ್ಲಿ ಡಿಪ್ಲೊಮಾ ಜೊತೆಗೆ ಕೃಷಿ ಪದವಿ ಕಾಲೇಜು ಕೂಡಲೇ ಆರಂಭಿಸಬೇಕು. ರಾಜ್ಯದ 13 ಕೃಷಿ ಡಿಪ್ಲೊಮಾ ಕಾಲೇಜನ್ನು ಬಂದ್​ ಮಾಡಲು ಸರ್ಕಾರ ಹೊರಟಿದ್ದು, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಬೀದಿ ಪಾಲಾಗಿದ್ದಾರೆ ಎಂದರು.

ಕೃಷಿ ಕಾಲೇಜು ಉಳಿಸಿ ಹೋರಾಟ ಸಮಿತಿ ನಿಯೋಗವು ಜೂ. 13ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ನಾಯಕರು ಸಭೆಗೆ ತಿಳಿಸಿದರು. ಜಿ.ಪಂ. ಮಾಜಿ ಸದಸ್ಯ ಮೈಮಾರ್ಡಿ ಸುಧಾಕರ ಶೆಟ್ಟಿ, ಸತೀಶ್​ ಶೆಟ್ಟಿ ರಟ್ಟಾಡಿ, ಸುಭಾಷ್​ ನಾಯಕ್​, ಕವಿರಾಜ್​ ಎಸ್​., ಕೆ. ಶಂಕರ್​, ಕೆ. ಸುರೇಶ್​ ಕಲ್ಲಾಗರ, ಶಶಿಧರ ಗೊಲ್ಲ ಉಪಸ್ಥಿತರಿದ್ದರು.