ಮೈಸೂರು: ಚಾಮುಂಡಿಬೆಟ್ಟದಲ್ಲಿ ದೇವರ ಸೇವಾ ಶುಲ್ಕ ಏರಿಕೆ ಮಾಡಿರುವುದನ್ನು ವಾಪಸ್ ಪಡೆಯುವಂತೆ ಜೆಡಿಎಸ್‌ನಿಂದ ಜಿಲ್ಲಾಡಳಿತಕ್ಕೆ ಮನವಿ ಪತ್ರ ನೀಡಲಾಯಿತು.
ಶ್ರೀಚಾಮುಂಡೇಶ್ವರಿ ದೇವಸ್ಥಾನದ ಪಂಚಾಮೃತ ಮತ್ತು ಏಕವಾರ ಅಭಿಷೇಕ ಸೇವೆ ಮುಂದುವರಿಸುವಂತೆ ಮಾಜಿ ಸಚಿವ ಸಾ.ರಾ. ಮಹೇಶ್ ಬರೆದಿರುವ ಪತ್ರವನ್ನು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರಿಗೆ ಬುಧವಾರ ನೀಡಲಾಯಿತು.
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜಾ ಸೇವೆಗಳ ಪೈಕಿ ಪಂಚಾಮೃತ ಅಭಿಷೇಕ 220 ರೂ. ಮತ್ತು ಏಕವಾರ ಅಭಿಷೇಕ 300 ರೂ.ಗಳ ಸೇವೆಯನ್ನು ಅನಧಿಕೃತವಾಗಿ ರದ್ದು ಮಾಡಲಾಗಿದೆ. ಇದರಿಂದ ಭಕ್ತರು ಅನಿವಾರ್ಯವಾಗಿ ಏಕದಶವಾರ ಅಭಿಷೇಕ 550 ರೂ. ಸೇವೆ ಮಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಪತ್ರದಲ್ಲಿ ದೂರಲಾಗಿದೆ.
ಇದರಿಂದಾಗಿ ಭಕ್ತರಿಗೆ ಸೇವೆ ಮಾಡಲು ತೊಂದರೆ ಆಗಿದೆ. ಆದ್ದರಿಂದ ಹಿಂದಿನಂತೆ ಸೇವಾ ಶುಲ್ಕ ಮುಂದುವರಿಸಬೇಕು, ಹೆಚ್ಚುವರಿ ಶುಲ್ಕ ರದ್ದುಪಡಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್.ಪ್ರಕಾಶ್‌ಪ್ರಿಯಾದರ್ಶನ್, ನಗರ ಹಿರಿಯ ಉಪಾಧ್ಯಕ್ಷ ಫಾಲ್ಕನ್ ಬೋರೇಗೌಡ, ಜೆಡಿಎಸ್ ಮೈಸೂರು ನಗರ ಎಸ್‌ಟಿ ವಿಭಾಗದ ಅಧ್ಯಕ್ಷ ಮಧುವನ ಚಂದ್ರು, ನಿಕಟಪೂರ್ವ ಮಹಾ ಪ್ರಧಾನ ಕಾರ್ಯದರ್ಶಿ ಪಿ.ಎಸ್. ರಾಜಶೇಖರಮೂರ್ತಿ ಇದ್ದರು.