ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ/ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಿ ವೇತನ ಪರಿಷ್ಕರಣೆ ಆದೇಶ ಹೊರಡಿಸಬೇಕು ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಕವಿವಿ ಕುಲಪತಿಗೆ ಆಗ್ರಹಿಸಿದ್ದಾರೆ.
ಕರ್ನಾಟಕ ವಿಶ್ವ ವಿದ್ಯಾಲಯ ಆವರಣದಲ್ಲಿ ಅತಿಥಿ ಉಪನ್ಯಾಸಕರು ಹಮ್ಮಿಕೊಂಡಿರುವ ನಿರಂತರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ಕವಿವಿ ವ್ಯಾಪ್ತಿಯಲ್ಲಿ ಸಹಾಯಕ/ಅತಿಥಿ ಉಪನ್ಯಾಸಕರಾಗಿ, ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಬೇಕು. ವೇತನ ಹೆಚ್ಚಳ ಮಾಡುವಂತೆ ಈ ಹಿಂದೆ ಹೋರಾಟ ನಡೆಸಿದಾಗ 2022ರಲ್ಲೇ ಆಡಳಿತ ಮಂಡಳಿ ಭರವಸೆ ನೀಡಿತ್ತು. ಆದರೆ ಈವರೆಗೂ ಪರಿಷ್ಕರಣೆ ಮಾಡದಿರುವುದು ವಿಷಾದನಿಯ. ಇದರಿಂದ ಬಹಳಷ್ಟು ಸಮಸ್ಯೆಗಳು ಉದ್ಭವಿಸಿವೆ. ತಕ್ಷಣ ಉಪಕುಲಪತಿ ಈ ವಿಚಾರವಾಗಿ ಹೆಚ್ಚಿನ ಗಮನಹರಿಸಿ ತಕ್ಷಣ ವೇತನ ಹೆಚ್ಚಳದ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಡಾ. ಶರಣು ಮುಷ್ಠಿಗೇರಿ, ಡಾ.ಎಂ.ವೈ.ಬ್ಯಾಲ್ಯಾಳ, ಡಾ. ಅಶೋಕ, ಡಾ. ಇಂದ್ರಾಯಿಣಿ ಕಟ್ಟಿ, ಡಾ. ವಿಪುಲಾ ಮಹೇಂದ್ರಕರ, ಇತರರು ಇದ್ದರು.