ಮೈಸೂರು: ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ಚಾಮುಂಡಿ ಟೆಕ್ಸ್‌ಟೈಲ್ಸ್ ಘಟಕದ ಸೀ.ಟೀ. ಸಿಲ್ಕ್‌ನಲ್ಲಿ 16-17 ವರ್ಷಗಳಿಂದ ದುಡಿಯುತ್ತಿದ್ದ ಸುಮಾರು 16 ಕಾಯಂ ಮಹಿಳಾ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆಯಲಾಗಿದೆ. ಹೀಗಾಗಿ, ಕಾರ್ಮಿಕ ಇಲಾಖೆ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮೈಸೂರು ವಿಭಾಗೀಯ ಕೈಗಾರಿಕಾ ನೌಕರರ ಕೇಂದ್ರೀಯ ಯೂನಿಯನ್ ಆಗ್ರಹಿಸಿದೆ.
ಯೂನಿಯನ್‌ನ ಖಜಾಂಚಿ ಲಲಿತಾ ಮಾತನಾಡಿ, ಫೆಬ್ರವರಿ 15 ರಂದು ಸಂಜೆ ಕಾರ್ಮಿಕರು ಕರ್ತವ್ಯ ಮುಗಿಸಿ ಮನೆಗೆ ತೆರಳಿದ ಬಳಿಕ ಏಕಾಏಕಿ ಎಲ್ಲ ಮಹಿಳಾ ಕಾರ್ಮಿಕರನ್ನು ತೆಗೆದುಹಾಕಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ರೀಟ್ರೆಂಚ್‌ಮೆಂಟ್ ಪ್ರಕ್ರಿಯೆ ನಡೆಸುವ ಮುನ್ನ ಯಾವುದೇ ನೋಟಿಸ್ ನೀಡಿಲ್ಲ. ಜತೆಗೆ ಅಲ್ಲಿನ ಯಂತ್ರಗಳನ್ನು ಚಾಮಂಡಿ ಟೆಕ್ಸ್‌ಟೈಲ್ಸ್‌ಗೆ ಸಾಗಿಸುವ ಯತ್ನವೂ ನಡೆದಿದೆ. ಸೀ.ಟೀ. ಸಿಲ್ಕ್ ಕಂಪನಿಯು ಚಾಮುಂಡಿ ಟೆಕ್ಸ್‌ಟೈಲ್ಸ್ ಕಾರ್ಖಾನೆ ಘಟಕ ಎಂದು ಹೇಳುತ್ತಿದ್ದರೂ ಪ್ರತ್ಯೇಕ ಆಡಳಿತ ಮಂಡಳಿ ಇಲ್ಲ. ಹೀಗಾಗಿ, ಸರ್ಕಾರ ಮತ್ತು ವಿವಿಧ ಇಲಾಖೆಗಳು ಮಧ್ಯ ಪ್ರವೇಶಿಸಿ, ಸಂತ್ರಸ್ತ ಮಹಿಳಾ ಕಾರ್ಮಿಕರ ನೆರವಿಗೆ ಬರಬೇಕು ಎಂದು ಕೋರಿದರು. ಮುಖಂಡರಾದ ವಿ. ಗೀತಾ, ಚಂದ್ರಮ,, ಎನ್.ಕೆ. ದೇವದಾದ್ ಇನ್ನಿತರರು ಇದ್ದರು.