ಹುಬ್ಬಳ್ಳಿ: ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳಲಿರುವ ನಾಲ್ಕು ಕಾರ್ಮಿಕ ಸಂಹಿತೆ ರದ್ದು ಪಡಿಸಲು ಹಾಗೂ ರೈತ ಕಾರ್ಮಿಕರ ಬೇಡಿಕೆ ಈಡೇರಿಕೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ನಗರದ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಕಾರ್ಮಿಕ ವರ್ಗದ ಹಕ್ಕೊತ್ತಾಯ ಈಡೇರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾಗದಿದ್ದರೆ, ಜುಲೈ 9ರಂದು ದೇಶದ ದುಡಿಯುವ ಜನರ ದೇಶವ್ಯಾಪಿ ಮುಷ್ಕರವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರ ಜಾರಿಮಾಡಲು ಹೊರಟಿರುವ ನಾಲ್ಕು ಕಾರ್ಮಿಕ ಸಂಹಿತೆ ರದ್ದುಪಡಿಸಬೇಕು. ರಾಜ್ಯದಲ್ಲಿ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆಗೆ ಹೆಚ್ಚಿಸಿರುವ ಆದೇಶ ಕೂಡಲೇ ಹಿಂಪಡೆಯಬೇಕು. ಜೀವನ ಯೋಗ್ಯ ಕನಿಷ್ಠ ವೇತನ 36,000 ರೂ. ನಿಗದಿಮಾಡಬೇಕು. ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ಕನಿಷ್ಠ 8000 ರೂ. ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ಕೂಲಿ 600ರೂ., ದುಡಿತದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಂಚಾಲಕರಾದ ಅಶೋಕ ಬಾರ್ಕಿ, ಎ.ಎಸ್. ಪೀರಜಾದೆ, ಗಂಗಾಧರ ಬಡಿಗೇರ, ಶರಣು ಗೊನವಾರ, ದೀಪಾ, ದೇವರಾಜ ಕಂಬಳಿ ಮಾತನಾಡಿದರು.
ಪ್ರಮುಖರಾದ ಬಸವಣ್ಣೆಪ್ಪ ನೀರಲಗಿ, ಗುರುಸಿದ್ದಪ್ಪ ಅಂಬಿಗೇರ, ನಾರಾಯಣ ಆರೇರ, ಬಿ.ಐ. ಈಳೀಗೇರ, ಮಹೇಶ ಹುಲಗೋಡ, ಭುವನಾ ಬಳ್ಳಾರಿ, ಸರಸ್ವತಿ ಚಲವಾದಿ, ಫಕ್ಕೀರೇಶ ಹರಕುಣಿ, ಎಂ.ಎ. ಮುಲ್ಲಾ. ಗಾಳೆಪ್ಪ ಮುತ್ಯಾಳ, ಮೊಹ್ಮದರಫೀಕ್ ಮುಳಗುಂದ, ಅಜ್ಮೀರ ಸೊರಟಗೇರಿ, ಹನಮಂತ ಅಂಬಿಗೇರ ಸೇರಿ ವಿವಿಧ ಕಾರ್ಮಿಕರು ಭಾಗವಹಿಸಿದ್ದರು.