ಜಿಲ್ಲೆ

ವಕ್ಫ ಹೆಸರು ತೆರವಿಗೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ಧಾರವಾಡ

ಯಾವುದೇ ಕಾರಣ ಇಲ್ಲದೆ ನಮ್ಮ ಆಸ್ತಿಗಳ ಮೇಲೆ ವಕ್ಫ ಹೆಸರು ಸೇರಿಸಲಾಗಿದೆ. ಇದರಿಂದ ನಮಗೆ ಸರ್ಕಾರದ ಸೌಲಭ್ಯಗಳು ಸಿಗದಂತಾಗಿವೆ. ಹೀಗಾಗಿ ಸರ್ಕಾರ ಕೂಡಲೇ ವಕ್ಫ ಹೆಸರು ತೆಗೆಯಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮುಲ್ಲಾ ಸಂಘದ ಜಿಲ್ಲಾಧ್ಯಕ್ಷ ಮಹ್ಮದ್​ರಫೀಕ್​ ಮಹ್ಮದ್​ಗೌಸ್​ ಮುಲ್ಲಾ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರವರೆಗೆ ಎಲ್ಲವೂ ಸರಿಯಾಗಿತ್ತು. ಪಹಣಿಯಲ್ಲಿ ನಮ್ಮ ಹೆಸರುಗಳೇ ಇದ್ದವು. ಆದರೆ 2018ರಲ್ಲಿ ನಮ್ಮ ಪಹಣಿಗಳಲ್ಲಿ ವಕ್ಫ ಹೆಸರು ನಮೂದಿಸಲಾಗಿದೆ. ಈಗಾಗಲೇ ಸಾಕಷ್ಟು ರೈತರು ಈ ವಿಷಯವಾಗಿ ದೂರು ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ತಹಸೀಲ್ದಾರರು ಜಿಲ್ಲಾಧಿಕಾರಿ, ಉಪವಿಭಾಗಧಿಕಾರಿ ಮೇಲೆ ಹಾಕಿ ಸುಮ್ಮನಾಗುತ್ತಿದ್ದಾರೆ. ಜಿಲ್ಲಾಧಿಕಾರಿಗೆ ಸಹ ದೂರು ಸಲ್ಲಿಸಲಾಗಿದೆ. ಆದಾಗ್ಯೂ ಕ್ರಮವಾಗಿಲ್ಲ ಎಂದು ದೂರಿದರು.

ರಾಜ್ಯಾದ್ಯಂತ ಇಂತಹ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ಕ್ರಮಕ್ಕೆ ಮುಂದಾಗದಿರುವುದು ಸೂಜಿಗದ ಸಂಗತಿ. ಅನ್ವರ ಮಾಣಿಪ್ಪಾಡಿ ವರದಿಯಲ್ಲಿ ಸಹ ಮುಲ್ಲಾ, ಮುಜಾವರ, ಖಾಜಿ, ಮಕಾಂದಾರ ಅವರ ಆಸ್ತಿಯ ಬಗ್ಗೆ ಉಲ್ಲೇಖ ಇಲ್ಲ. ಈಗ ವಕ್ಫ ಹೆಸರು ನಮೂದಾಗಿದ್ದರಿಂದ ಸರ್ಕಾರದ ಸೌಲಭ್ಯಗಳು, ಸಬ್ಸಿಡಿ ಗೊಬ್ಬರ, ಬೀಜಗಳು ಸಿಗದಂತಹ ಸ್ಥಿತಿ ಉದ್ಭವಿಸಿದೆ. ಜಿಲ್ಲೆಯಲ್ಲಿ ಸುಮಾರು 60 ಸಾವಿರ ಎಕರೆ ಜಮೀನುಗಳಿಗೆ ವಕ್ಫ ಹೆಸರು ನಮೂದಿಸಲಾಗಿದೆ ಎಂದು ಆರೋಪಿಸಿದರು.

2018ರಲ್ಲಿ ನಮ್ಮ ಆಸ್ತಿ ಕಬಳಿಕೆ ಮಸೀದಿ ಎಂದು ನಮೂದಿಸಿ ವಕ್ಫ ಹೆಸರು ಸೇರಿಸಲಾಗಿದೆ. ಆದರೆ ನಾವು ಯಾವುದೇ ಕಬಳಿಕೆ, ಆಸ್ತಿ ದಾನ ಮಾಡಿಲ್ಲ. ಆದಾಗ್ಯೂ ನೋಟಿಸ್​ ಜಾರಿ ಮಾಡದೆ ವಕ್ಫ ಹೆಸರು ನಮೂದಿಸಿದ್ದಾರೆ. ಸರ್ಕಾರ ಕೂಡಲೇ ಈ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಮಹ್ಮಮದ್​ ಸಾಬ್​ ಎ. ಮುಲ್ಲಾ, ಮಕ್ತುಂಮ್​ ಹುಸೇನ್​ ಮುಲ್ಲಾ, ಇತರರು ಇದ್ದರು.