ಮಂಡ್ಯ: ಶ್ರೀರಂಗಪಟ್ಟಣದ ಕಾವೇರಿ ನದಿ ಪಾತ್ರದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು ಹಾಗೂ ಕಾಫಿ, ಟೀಯನ್ನು ಪ್ಲಾಸ್ಟಿಕ್ ಲೋಟ ಹಾಗೂ ಕವರ್‌ನಲ್ಲಿ ನೀಡುತ್ತಿರುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಬುಧವಾರ ನಗರದಲ್ಲಿ ಕನ್ನಡಸೇನೆ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಸೇನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ರೋಹಿಣಿ ಮನವಿ ಸ್ವೀಕರಿಸಿದರು. ಶ್ರೀರಂಗಪಟ್ಟಣ ಕಾವೇರಿ ನದಿ ಪಾತ್ರದಲ್ಲಿ ಅಕ್ರಮವಾಗಿ ರೆಸಾರ್ಟ್, ಹೋಂ ಸ್ಟೇಗಳು ನಿರ್ಮಾಣ ಮಾಡುತ್ತಿದ್ದಾರೆ. ಯಾವುದೇ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಮಾಲೀಕರ ಕ್ರಮಕೈಗೊಳ್ಳಬೇಕು. ತಕ್ಷಣ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಕಟ್ಟಡಗಳ ನಿರ್ಮಾಣದಿಂದ ನದಿಪಾತ್ರದ ಬಂಡೆಗಳ ನಾಶವಾಗುತ್ತಿದೆ. ಮಾತ್ರವಲ್ಲದೆ ನದಿಪಾತ್ರದಲ್ಲಿ ಒತ್ತುವರಿ ಮಾಡಿಕೊಂಡು ಕಾಮಗಾರಿ ನಡೆಸುತ್ತಿದ್ದಾರೆ. ಇದನ್ನು ಕಂಡುಕಾಣದಂತೆ ಇರುವ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾಗುತ್ತಿದೆ. ಕಾವೇರಿ ನದಿಗೆ ಕಂಟಕವಾಗಿರುವ ಕಟ್ಟಡಗಳನ್ನು 15 ದಿನದೊಳಗೆ ನೆಲಸಮ ಮಾಡಿ ಕಾವೇರಿ ನದಿ ಸಂರಕ್ಷಣೆ ಮಾಡಬೇಕು. ಈಗಾಗಲೇ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವ ಮಾಲೀಕರಿಗೆ ನೋಟೀಸ್ ನೀಡಿ, ಅಧಿಕಾರಿಗಳು ಸ್ಥಳಕ್ಕೂ ಭೇಟಿ ನೀಡಿ ಸ್ಥಳ ಪರೀಶೀಲನೆ ಸಹ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಕೆಲಸಗಳಿಗೆ ಅವಕಾಶಗಳನ್ನು ಕೊಡಬಾರದೆಂದು ಒತ್ತಾಯಿಸಿದರು.
ಇನ್ನು ಜಿಲ್ಲಾದ್ಯಂತ ಹಾಲು, ಟೀ ಮತ್ತು ಕಾಫಿಯನ್ನು ಪ್ಲಾಸ್ಟಿಕ್ ಲೋಟ ಹಾಗೂ ಕವರ್‌ನಲ್ಲಿ ನೀಡಲಾಗುತ್ತಿದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಇಂತಹ ಬಳಕೆಯಿಂದ ಕ್ಯಾನ್ಸರ್ ರೋಗ ಕಾಣಿಸಿಕೊಳ್ಳುತ್ತಿದೆ. ಪ್ಲಾಸ್ಟಿಕ್ ಲೋಟ ಬಳಸದಂತೆ ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಆದೇಶ ಮಾಡಿ ಜಿಲ್ಲಾದ್ಯಂತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸೇನೆಯ ಮಹಿಳಾ ಅಧ್ಯಕ್ಷೆ ಸೌಭಾಗ್ಯ ಶಿವಲಿಂಗು, ರಾಜ್ಯ ಸಂಚಾಲಕ ಜಿ.ಮಹಾಂತಪ್ಪ, ಮಂಡ್ಯ ತಾಲೂಕು ಅಧ್ಯಕ್ಷ ಸತೀಶ್, ಆಟೋ ಘಟಕದ ಜಿಲ್ಲಾಧ್ಯಕ್ಷ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ, ಸಂಚಾಲಕ ವೇಣುಗೋಪಾಲ್, ನಗರ ಕಾರ್ಯಾಧ್ಯಕ್ಷ ರವಿ, ತಾಲೂಕು ಉಪಾಧ್ಯಕ್ಷ ಕುಮಾರ್ ಇತರರಿದ್ದರು.