ಮದ್ದೂರು: ತೀವ್ರ ಬರಗಾಲದಿಂದ ತತ್ತರಿಸಿರುವ ರೈತರಿಗೆ ಬರ ಪರಿಹಾರ ನೀಡಬೇಕು. ನಾಲೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಕೃಷಿ ಸಹಾಯಕ ನಿರ್ದೇಶಕ ಡಿ.ಪರಮೇಶ್ ಹಾಗೂ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ಉಪಾಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ರಾಜ್ಯದ ಜನತೆ ತತ್ತರಿಸಿದ್ದಾರೆ. ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಬೆಳೆಗಳು ಒಣಗಿ ನಿಂತಿವೆ. ಈ ಮಧ್ಯೆ ಅಲ್ಪಸ್ವಲ್ಪ ಮಳೆಯಾದ ಕಾರಣ ಬೆಳೆಗಳಿಗೆ ಮರುಜೀವ ಬಂದಿದ್ದು ಅವುಗಳನ್ನು ಉಳಿಸಿಕೊಳ್ಳಲು ನಾಲೆಗಳಿಗೆ ನೀರು ಹರಿಸಬೇಕು ಎಂದು ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಟಿ.ಆರ್. ಸಿದ್ದೇಗೌಡ, ಮುಖಂಡರಾದ ಗೆಜ್ಜಲಗೆರೆ ಚಂದ್ರಶೇಖರ್, ಶ್ರೀನಿವಾಸ್, ರಾಮಣ್ಣ ಇತರರು ಇದ್ದರು.