ಜಿಲ್ಲೆ

ಅಳ್ನಾವರದ ಪ್ರಜಾಸೌಧ ಕಟ್ಟಡ ಸ್ಥಳಾಂತರಕ್ಕೆ ಒತ್ತಾಯ

ಅಳ್ನಾವರ: ತಾಲೂಕು ರಚನೆಗೊಂಡು 8 ವರ್ಷಗಳು ಕಳೆದರೂ ಸಾರ್ವಜನಿಕರಿಗೆ ಅನಾನುಕೂಲವಾಗುವ ಸ್ಥಳದಲ್ಲಿ, ಪಟ್ಟಣದಿಂದ ಎರಡು ಕಿಮೀಯಷ್ಟು ದೂರದಲ್ಲಿ ನಿರ್ವಣವಾಗುತ್ತಿರುವ ಪ್ರಜಾಸೌಧ ಕಟ್ಟಡದ ಸ್ಥಳವನ್ನು ಪರಿಶೀಲಿಸಿ ಸ್ಥಳಾಂತರಿಸಬೇಕು ಎಂದು ತಾಲೂಕು ಬಿಜೆಪಿ ಕಾರ್ಯಕರ್ತರು ಬುಧವಾರ ಧಾರವಾಡದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಹಳಿಯಾಳ-ಬೆಳಗಾವಿ ರಸ್ತೆ ಮಧ್ಯೆ ಇರುವ ರೈಲ್ವೆ ಒಳ ಸೇತುವೆಯು ಪ್ರತಿ ವರ್ಷ ಮಳೆಗಾಲದಲ್ಲಿ ನೀರು ಹರಿದು ವಾಹನಗಳ ಸಂಚಾರ ಸ್ಥಗಿತಗೊಳ್ಳುತ್ತದೆ. 2 ಕಿಮೀ ಅಂತರದಲ್ಲಿ ನಿರ್ವಿುಸಲಾಗುತ್ತಿರುವ ಕಟ್ಟಡದ ಸ್ಥಳದಲ್ಲಿ ಅನಾದಿಕಾಲದಿಂದಲೂ ಮರಣ ಹೊಂದಿದ ಬಾಣಂತಿಯರನ್ನು ಸುಡಲಾಗುತ್ತದೆ. ಅಕ್ಕ ಪಕ್ಕದಲ್ಲಿ ವಿವಿಧ ಸಮುದಾಯದವರ ಸ್ಮಶಾನ ಭೂಮಿಯೂ ಇದೆ.

ಕಚೇರಿಯ ಕೆಲಸ ಕಾರ್ಯಗಳಿಗೆ ಬಡವರು, ಜನಸಾಮಾನ್ಯರು ಎರಡು ಕಿಮೀ ಸಂಚರಿಸಲು ವಾಹನಗಳಿಗೆ ಹಣ ವ್ಯಯಿಸಬೇಕಾಗುತ್ತದೆ. ಸಮಯವೂ ಪೋಲಾಗುತ್ತದೆ. ಹೀಗಾಗಿ ಕೂಡಲೇ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಟ್ಟಣದ ಮಧ್ಯಭಾಗದಲ್ಲಿ ಸ್ಥಳ ಗುರುತಿಸಿ ಅಲ್ಲಿಯೇ ಪ್ರಜಾಸೌಧ ನಿರ್ವಿುಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ಲಖನ್ ಬರಗುಂಡಿ, ಶಿವಾಜಿ ಡೊಳ್ಳಿನ, ಸಂದೀಪ ಪಾಟೀಲ, ಮಲ್ಲಪ್ಪ ಗಾಣಿಗೇರ, ಯಲ್ಲಾರಿ ಹುಬ್ಳಿಕರ, ಭರತೇಶ ಪಾಟೀಲ, ಪರಶುರಾಮ ರೆಡೆಕರ, ಪ್ರಕಾಶ ಗಾಣಿಗೇರ, ಸೋಮಶೇಖರ ಹೂಗಾರ, ನಾಗರಾಜ ಬುಡರಕಟ್ಟಿ, ಪಿ. ಎಂ. ಕಾಕತ್ಕರ, ಪರಶುರಾಮ ಪಾಲಕರ, ಇತರರಿದ್ದರು.